ಸಿರಿಧಾನ್ಯಗಳ ಬಗ್ಗೆ ಹಾಡು ಬರೆದ ಮೋದಿ: ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಾಲ್ಗುಣಿ ಶಾ ಸಂಗೀತ ನೀಡಿದ ಸಾಂಗ್‌ ರಿಲೀಸ್‌

ನ್ಯೂಯಾರ್ಕ್ (ಜೂನ್ 17, 2023): ಪ್ರಧಾನಿ ನರೇಂದ್ರ ಮೋದಿ ಅವರು ಸಿರಿಧಾನ್ಯಗಳ ಮಹತ್ವವನ್ನು ಸಾರುವ ಹಾಡನ್ನು ಶುಕ್ರವಾರ ಬಿಡುಗಡೆ ಮಾಡಿದರು. ಈ ಹಾಡನ್ನು ಖುದ್ದು ಪ್ರಧಾನಿ ಮೋದಿ ಅವರು ಬರೆದಿದ್ದಾರೆ. 

ಇದಕ್ಕೆ ಭಾರತ ಮೂಲದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಾಲ್ಗುಣಿ ಶಾ ಹಾಗೂ ಅವರ ಪತಿ ಗಾಯಕ ಗೌರವ್‌ ಸಂಗೀತ ನೀಡಿ ಹಾಡಿನಲ್ಲಿ ಪಾತ್ರ ವಹಿಸಿದ್ದಾರೆ. ಈ ಹಾಡು ಸಿರಿಧಾನ್ಯಗಳ ಮಹತ್ವವನ್ನು ಸಾರಿ ಜಾಗತಿಕ ಹಸಿವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 

ಈ ಹಾಡು ಮೊದಲಿಗೆ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಬಿಡುಗಡೆಯಾಗಿದ್ದು, ಬಳಿಕ ಎಲ್ಲ ಭಾಷೆಗಳಿಗೆ ಅನುವಾದವಾಗಲಿದೆ ಎಂದು ಫಾಲ್ಗುಣಿ ಶಾ ತಿಳಿಸಿದರು. ಇದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು,‘ಕಳೆದ ವರ್ಷ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಆಗ ನಾನು ತುಂಬಾ ಸಂತೋಷ, ಇದಕ್ಕೆ ನೀವು ಸಾಹಿತ್ಯ ಬರೆಯಬೇಕು ಎಂದು ಕೇಳಿದ್ದೆ. ಅದಕ್ಕೆ ಅವರು ಸಂತೋಷದಿಂದ ಒಪ್ಪಿದ್ದರು. ಬಳಿಕ ಅವರೊಂದಿಗೆ ಕೆಲಸ ಮಾಡಲು ಬಹಳ ಸಂತೋಷವಾಗಿತ್ತು. ಈ ಮೂಲಕ ಅವರು ಸಂಗೀತವನ್ನು ಇನ್ನು ಹೆಚ್ಚಿನ ಸಾರ್ಥಕತೆಗೆ ಕೊಂಡೊಯ್ದಿದ್ದಾರೆ’ ಎಂದರು.

2023 ನೇ ವರ್ಷವನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಗೊತ್ತುಪಡಿಸಲಾಗಿದೆ. ಇದರ ಪ್ರಸ್ತಾಪವನ್ನು ಭಾರತವು ಮುಂದಿಟ್ಟಿದ್ದು UN ನ ಆಹಾರ ಮತ್ತು ಕೃಷಿ ಸಂಸ್ಥೆ (FAO) ಆಡಳಿತ ಮಂಡಳಿಗಳ ಸದಸ್ಯರು ಹಾಗೂ 75 ನೇ UN ಜನರಲ್ ಅಸೆಂಬ್ಲಿ ಅಧಿವೇಶನದಿಂದ ಅನುಮೋದಿಸಲಾಗಿದೆ. “ಪ್ರಧಾನಿ ಮೋದಿ ಅವರು ನನ್ನ ಮತ್ತು ನನ್ನ ಪತಿ ಗೌರವ್ ಶಾ ಅವರೊಂದಿಗೆ ಹಾಡನ್ನು ಬರೆದಿದ್ದಾರೆ” ಎಂದು ಫಾಲು ಹಾಡು ಬಿಡುಗಡೆಗೂ ಮುನ್ನ ಪಿಟಿಐಗೆ ತಿಳಿಸಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯಲಾದ ಹಾಡನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಸಿರಿಧಾನ್ಯಗಳ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದೂ ಅವರು ಹೇಳಿದರು.

ಈ ಮದ್ಯೆ, “ಫಾಲು ಮತ್ತು ಗೌರವ್ ಶಾ ಅವರು ಜೂನ್ 16, 2023 ರಂದು ಅಂತಾರಾಷ್ಟ್ರೀಯ ಮಿಲೆಟ್ಸ್‌ ವರ್ಷದ ಆಚರಣೆಯಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ‘ಅಬಂಡನ್ಸ್ ಇನ್ ಮಿಲೆಟ್ಸ್’ ಟ್ರ್ಯಾಕ್ ಅನ್ನು ಬಿಡುಗಡೆ ಮಾಡುತ್ತಾರೆ. ಪ್ರಪಂಚದ ಹಸಿವನ್ನು ಕಡಿಮೆ ಮಾಡಲು ಮತ್ತೊಂದು ಸಂಭಾವ್ಯ ಕೀಲಿಯಾಗಿ ಸೂಪರ್ ಧಾನ್ಯದ ಬಗ್ಗೆ ಅರಿವು ಮೂಡಿಸಲು ‘ಅಬಂಡನ್ಸ್ ಇನ್ ಮಿಲೆಟ್ಸ್’ ಅನ್ನು ರಚಿಸಲಾಗಿದೆ” ಎಂದು ಫಾಲು ಅವರ ವೆಬ್‌ಸೈಟ್‌ನಲ್ಲಿ ಹೇಳಿಕೆ ತಿಳಿಸಿದೆ. ಹಾಗೆ, ಶುಕ್ರವಾರ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.