ಬೆಂಗಳೂರು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಜುಲೈನಿಂದ ಬಿಪಿಎಲ್ ಪಡಿತರದಲ್ಲಿ 10 ಕೇಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದೆ. ಈ ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಪಡಿತರದಲ್ಲಿ ಉಚಿತ ಅಕ್ಕಿ ನೀಡುವ ಇರಾದೆ ಅದರದ್ದು. ಹೀಗಾಗಿ ಅದು ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮದಿಂದ (ಎಫ್ಸಿಐ) ‘ಸೆಂಟ್ರಲ್ ಪೂಲ್’ನಲ್ಲಿ 2.28 ಲಕ್ಷ ಟನ್ ಹೆಚ್ಚುವರಿ ಅಕ್ಕಿ ಖರೀದಿ ಉದ್ದೇಶ ಹೊಂದಿದೆ. ಆದರೆ ಅಕ್ಕಿ ನೀಡಲು ಈಗ ಎಫ್ಸಿಐ ನಿರಾಕರಿಸಿದೆ. ಹೀಗಾಗಿ 10 ಕೇಜಿ ಉಚಿತ ಅಕ್ಕಿ ನೀಡುವ ಸಿದ್ದು ಸರ್ಕಾರದ ಉದ್ದೇಶಕ್ಕೆ ತೀವ್ರ ಹಿನ್ನಡೆ ಆಗಿದೆ. ಇದು ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿಯನ್ನೂ ಎಬ್ಬಿಸಿದ್ದು, ಕಾಂಗ್ರೆಸ್-ಬಿಜೆಪಿ ವಾಕ್ಸಮರಕ್ಕೆ ನಾಂದಿ ಹಾಡಿದೆ. ಹಾಗಿದ್ದರೆ ಈ ಸೆಂಟ್ರಲ್ ಪೂಲ್ ಎಂದರೇನು? ಇದರ ಉದ್ದೇಶ ಏನು? ಏಕೆ ಈಗ ಅಕ್ಕಿ ನೀಡಲು ಕೇಂದ್ರ ನಿರಾಕರಿಸಿದೆ ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಸೆಂಟ್ರಲ್ ಪೂಲ್ ಎಂದರೇನು?
ಕೇಂದ್ರ ಸರ್ಕಾರವು ದೇಶದ ಎಲ್ಲ ರಾಜ್ಯಗಳಿಗೆ ವಿತರಿಸಲೆಂದು ತನ್ನದೇ ಆದ ಆಹಾರ ಧಾನ್ಯದ ಸಂಗ್ರಹ ಹೊಂದಿರುತ್ತದೆ. ಇದಕ್ಕೆ ‘ಸೆಂಟ್ರಲ್ ಪೂಲ್’ (ಕೇಂದ್ರೀಯ ಆಹಾರ ಕೋಶ) ಎನ್ನುತ್ತಾರೆ. ಅದಕ್ಕೆಂದೇ ಕೇಂದ್ರ ಸರ್ಕಾರವು ಹೆಚ್ಚುವರಿ ಅಕ್ಕಿ-ಗೋಧಿ ಹೆಚ್ಚು ಬೆಳೆಯುವ ರಾಜ್ಯಗಳನ್ನು ಗುರುತಿಸಿರುತ್ತದೆ. ಈ ರಾಜ್ಯಗಳು ತಮಗೆ ಬೇಕಾಷ್ಟು ಅಕ್ಕಿ-ಗೋಧಿ ಇರಿಸಿಕೊಂಡು ಮಿಕ್ಕ ಹೆಚ್ಚುವರಿ ಧಾನ್ಯವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತವೆ. ಕೇಂದ್ರ ಸರ್ಕಾರವು ಈ ಹೆಚ್ಚುವರಿ ಅಕ್ಕಿ-ಗೋಧಿಯನ್ನು ಭಾರತೀಯ ಆಹಾರ ನಿಗಮ (ಎಫ್ಸಿಐ) ಉಗ್ರಾಣಗಳಲ್ಲಿ ಸಂಗ್ರಹಿಸಿ ‘ಸೆಂಟ್ರಲ್ ಪೂಲ್’ ಹೆಸರಿನಲ್ಲಿ ಇಟ್ಟುಕೊಂಡಿರುತ್ತದೆ. ಈ ಧಾನ್ಯಗಳನ್ನು ಅಗತ್ಯ ಇರುವ ರಾಜ್ಯಗಳಿಗೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕೇಂದ್ರವು ನೀಡುತ್ತದೆ.
ಸೆಂಟ್ರಲ್ ಪೂಲ್‌ಗೆ ಅಕ್ಕಿ ಸಂಗ್ರಹ ಹೇಗೆ?
ವಿವಿಧ ರಾಜ್ಯಗಳಿಂದ ಸೆಂಟ್ರಲ್ ಪೂಲ್‌ಗೆ ಅಕ್ಕಿ-ಗೋಧಿ ಹೋಗುತ್ತದೆ. ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಉತ್ತರ ಪ್ರದೇಶಗಳು ಭತ್ತದ ಕಣಜಗಳಾಗಿದ್ದು, ಇಲ್ಲಿಂದ ಕೇಂದ್ರೀಯ ಪೂಲ್‌ಗೆ ಹೆಚ್ಚು ಅಕ್ಕಿ ಹೋಗುತ್ತದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಒಟ್ಟಾರೆ ಸೆಂಟ್ರಲ್ ಪೂಲ್‌ನ ಶೇ.68ರಷ್ಟುಅಕ್ಕಿ ಸಂಗ್ರಹ ಇಲ್ಲಿಂದಲೇ ಆಗುತ್ತದೆ. ಇನ್ನು ಗೋಧಿಯಲ್ಲಿ ಹರ್ಯಾಣ ಹಾಗೂ ಪಂಜಾಬ್ ಮುಂಚೂಣಿಯಲ್ಲಿದ್ದು, ಈ ಎರಡೂ ರಾಜ್ಯಗಳು ಸೆಂಟ್ರಲ್ ಪೂಲ್ ಗೋಧಿಯಲ್ಲಿ ಶೇ.91ರಷ್ಟುಪಾಲು ಹೊಂದಿವೆ. ಈ ರಾಜ್ಯಗಳು ತಮಗೆ ಬೇಕಾದಷ್ಟುಅಕ್ಕಿ-ಗೋಧಿ ಹಾಗೂ ಧಾನ್ಯಗಳನ್ನು ಇಟ್ಟುಕೊಂಡು ಮಿಕ್ಕ ಅಕ್ಕಿ-ಗೋಧಿಯನ್ನು ಕೇಂದ್ರೀಯ ಪೂಲ್‌ಗೆ ನೀಡಬೇಕು ಎಂಬ ನಿಯಮವಿದೆ.
ಸೆಂಟ್ರಲ್ ಪೂಲ್‌ನ ಉದ್ದೇಶ ಏನು?
‘ದೇಶದ ಎಲ್ಲ ರಾಜ್ಯಗಳಿಗೆ ಪಡಿತರದಲ್ಲಿ ಅಕ್ಕಿ-ಗೋಧಿ ಸಮಾನವಾಗಿ ಪೂರೈಕೆ ಆಗಬೇಕು. ಈ ಮೂಲಕ ಜನರ ಹಸಿವು ನೀಗಿಸಬೇಕು’ ಎಂಬುದೇ ಸೆಂಟ್ರಲ್ ಪೂಲ್ ಉದ್ದೇಶ. ಹಲವು ರಾಜ್ಯಗಳು ಅಕ್ಕಿ-ಗೋಧಿ ಬೆಳೆಯಲ್ಲಿ ಮುಂಚೂಣಿಯಲ್ಲಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಈ ಧಾನ್ಯಗಳನ್ನು ಬೆಳೆಯುವುದೇ ಇಲ್ಲ. ಅಲ್ಲಿ ಬೇರೆಯದೇ ಆದ ಬೆಳೆ ಬೆಳೆಯಲಾಗುತ್ತದೆ. ಆದರೆ, ‘ಅಕ್ಕಿ-ಗೋಧಿ ಸಮಾನವಾಗಿ ಎಲ್ಲ ರಾಜ್ಯಗಳಿಗೂ ಹಂಚಿಕೆ ಆಗಬೇಕು. ಅಂದರೆ ಅಕ್ಕಿ-ಗೋಧಿ ಬೆಳೆಯದ ಪ್ರದೇಶಗಳಲ್ಲೂ ಈ ಧಾನ್ಯಗಳು ಲಭ್ಯವಾಗಬೇಕು’ ಎಂಬುದು ಕೇಂದ್ರ ಸರ್ಕಾರದ ಇರಾದೆ. ಅದಕ್ಕೆಂದೇ ಆಹಾರ ಭದ್ರತಾ ಕಾಯ್ದೆಯನ್ನು ಕೇಂದ್ರ ಜಾರಿಗೆ ತಂದಿದೆ. ಅಲ್ಲದೆ, ಬರಗಾಲ ಅಥವಾ ಪ್ರಕೃತಿ ವಿಕೋಪದಂಥ ಸಂದಭರ್ದಲ್ಲಿ, ಕೊರೋನಾದಂಥ ಆರೋಗ್ಯ ತುರ್ತುಸ್ಥಿತಿ ವೇಳೆ ಧಾನ್ಯಗಳ ಕೊರತೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ತನ್ನ ಮೀಸಲಿನಲ್ಲಿ ಅಕ್ಕಿ-ಗೋಧಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ. ಯಾವಾಗ ರಾಜ್ಯಗಳು ಈ ಧಾನ್ಯಗಳಿಗೆ ಬೇಡಿಕೆ ಇಡುತ್ತವೋ ಆಗ ಧಾನ್ಯಗಳನ್ನು ಅದು ನೀಡುತ್ತದೆ. ಅಲ್ಲದೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತನ್ನದೇ ಆದ ಸೆಂಟ್ರಲ್ ಪೂಲ್ನಿಂದ ನೇರವಾಗಿ ಅಕ್ಕಿ-ಗೋಧಿಯನ್ನು ಕೇಂದ್ರವು ರಾಜ್ಯಗಳಿಗೆ ಪಡಿತರ ರೂಪದಲ್ಲಿ ನೀಡುತ್ತದೆ. ಕೊರೋನಾ ಕಾಲದಲ್ಲಿ ಕೇಂದ್ರವೇ 80 ಕೋಟಿ ಬಡವರಿಗೆ ಇದೇ ವಿಧಾನದಲ್ಲಿ ತನ್ನ ಪಾಲಿನ ಪಡಿತರವನ್ನು ನೀಡಿತ್ತು ಎಂಬುದು ಇಲ್ಲಿ ಗಮನಾರ್ಹ.
ಕೇಂದ್ರ ಹೇಗೆ ಅಕ್ಕಿ-ಗೋಧಿ ವಿತರಣೆ ಮಾಡುತ್ತದೆ?
ಕೇಂದ್ರ ಸರ್ಕಾರವು ಇ-ಹರಾಜಿನ ಮೂಲಕ ಖಾಸಗಿ ಸಗಟು ವ್ಯಾಪಾರಿಗಳಿಗೆ ಹಾಗೂ ಇ-ಹರಾಜು ಇಲ್ಲದೆ ಬೇಡಿಕೆಗೆ ಅನುಸಾರವಾಗಿ ರಾಜ್ಯಗಳಿಗೆ ಸೆಂಟ್ರಲ್ ಪೂಲ್ನಿಂದ ಅಕ್ಕಿ ನೀಡುತ್ತದೆ. ವರ್ಷದಿಂದ ವರ್ಷಕ್ಕೆ ಆಯಾ ಸಮಯದ ಬೆಲೆಯ ಅನುಗುಣವಾಗಿ, ಕನಿಷ್ಠ ಖರೀದಿ ದರವನ್ನು ಸರ್ಕಾರ ನಿಗದಿಪಡಿಸುತ್ತದೆ. ಈ ವರ್ಷದ ಜನವರಿಯಲ್ಲಿ ಅದು ಜಾರಿ ಮಾಡಿದ ‘ಮುಕ್ತ ಮಾರುಕಟ್ಟೆಯೋಜನೆ-2023’ (ಎಂಒಎಸ್ಎಸ್) ನೀತಿಯ ಪ್ರಕಾರ, ರಾಜ್ಯ ಸರ್ಕಾರಗಳು ಅಕ್ಕಿ (ಸಾರವರ್ಧಿತ ಅಕ್ಕಿ ಸೇರಿ) ಹಾಗೂ ಗೋಧಿಯನ್ನು ಇ-ಹರಾಜಿನಲ್ಲಿ ಪಾಲ್ಗೊಳ್ಳದೆ ನೇರವಾಗಿ ಭಾರತೀಯ ಆಹಾರ ನಿಗಮದಿಂದ (ಎಫ್ಸಿಐ) ಖರೀದಿಸಬಹುದಾಗಿತ್ತು. ಇನ್ನು ಸಗಟು ವ್ಯಾಪಾರಿಗಳು ಇ-ಹರಾಜಿನಲ್ಲಿ ಪಾಲ್ಗೊಂಡು ಖರೀದಿ ಮಾಡಬಹುದಾಗಿತ್ತು.
ಕರ್ನಾಟಕ ಎಷ್ಟು ಅಕ್ಕಿಗೆ ಬೇಡಿಕೆ ಇಟ್ಟಿತ್ತು?
‘ಸೆಂಟ್ರಲ್ ಪೂಲ್ನಿಂದ 2.28 ಲಕ್ಷ ಟನ್ ಅಕ್ಕಿ ಜುಲೈ ತಿಂಗಳಿಗೆ ಬೇಕು. ಇದಕ್ಕಾಗಿ ಕ್ವಿಂಟಲ್ಗೆ 3400 ರು. ನೀಡುತ್ತೇವೆ’ ಎಂದು ಕರ್ನಾಟಕ ಇತ್ತೀಚೆಗೆ ಬೇಡಿಕೆ ಇರಿಸಿತ್ತು. ಕೇಂದ್ರ ಸರ್ಕಾರ ಜ.26ರಂದು ರೂಪಿಸಿದ ನಿಯಮದಂತೆ ಇ-ಟೆಂಡರ್ನಲ್ಲಿ ಪಾಲ್ಗೊಳ್ಳದೆ ನೇರವಾಗಿ ಸೆಂಟ್ರಲ್ ಪೂಲ್ನಿಂದ ಖರೀದಿ ಮಾಡಲು ಉದ್ದೇಶಿಸಿತ್ತು. ತನ್ನ ಬೇಡಿಕೆಯನ್ನು ಎಫ್ಸಿಐಗೆ ಸಲ್ಲಿಸಿತ್ತು.
ಕರ್ನಾಟಕಕ್ಕೆ ಅಕ್ಕಿ ನಿರಾಕರಣೆ ಏಕೆ?
ಕೇಂದ್ರದ ಬದಲಾದ ನಿಯಮವೇ ಕರ್ನಾಟಕದ ಅಕ್ಕಿಗೆ ಕೊಕ್ಕೆ ಬೀಳಲು ಕಾರಣ. ಈ ಮುನ್ನ ಕರ್ನಾಟಕವು ಜುಲೈಗೆ ಅಕ್ಕಿಗಾಗಿ ಬೇಡಿಕೆ ಇರಿಸಿದಾಗ ಎಫ್‌ಸಿಐನ ಕರ್ನಾಟಕ ಪ್ರಾದೇಶಿಕ ಕಚೇರಿ ಸಕಾರಾತ್ಮಕ ಪ್ರತಿಕ್ರಿಯೆ ತೋರಿತ್ತು. ತನ್ನ ಬಳಿ 7 ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಈ ಪೈಕಿ ಕರ್ನಾಟಕಕ್ಕೆ 2 ಹಂತದಲ್ಲಿ (ಒಮ್ಮೆ 2.08 ಲಕ್ಷ ಟನ್, ಇನ್ನೊಮ್ಮೆ 14 ಸಾವಿರ ಟನ್) ಅಕ್ಕಿ ನೀಡುತ್ತೇವೆ ಎಂದಿತ್ತು. ಆದರೆ ಇದಕ್ಕೂ ಕೆಲ ದಿನ ಮುನ್ನ ಕೇಂದ್ರ ಪಡಿತರ ಇಲಾಖೆ ಹೊಸ ನಿರ್ಣಯವೊಂದನ್ನು ಕೈಗೊಂಡಿದ್ದು, ಸೆಂಟ್ರಲ್ ಪೂಲ್ ಅಕ್ಕಿಯನ್ನು ಕರ್ನಾಟಕ ಸೇರಿದಂತೆ ಮಿಕ್ಕ ರಾಜ್ಯಗಳಿಗೆ ನೀಡದೇ ಇರಲು ತೀರ್ಮಾನಿಸಿತ್ತು. ಇದರ ಮಾಹಿತಿ ಪ್ರಾದೇಶಿಕ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಆದರೆ ಪಡಿತರ ಇಲಾಖೆ ನಿಯಮ ಬದಲಿಸಿದ್ದು ಗೊತ್ತಾದ ತಕ್ಷಣವೇ ಕರ್ನಾಟಕಕ್ಕೆ ಅಕ್ಕಿ ನೀಡಲು ಎಫ್ಸಿಐ ಬುಧವಾರ ನಿರಾಕರಿಸಿದೆ. ಇ-ಹರಾಜು ಮೂಲಕ ಖಾಸಗಿ ಸಗಟು ವ್ಯಾಪಾರಿಗಳಿಗೆ ಹಾಗೂ ನಾನಾ ಸಮಸ್ಯೆ ಎದುರಿಸುತ್ತಿರುವ ಇಶಾನ್ಯ ರಾಜ್ಯಗಳಿಗೆ ಮಾತ್ರ ಎಂದಿನಂತೆ ತನ್ನ ಪೂಲ್ನಲ್ಲಿನ ಅಕ್ಕಿ ನೀಡಲಾಗುವುದು ಎಂದಿದೆ ಹೇಳಿದೆ.
ಕರ್ನಾಟಕಕ್ಕೆ ಅಕ್ಕಿ ವಿತರಣೆ ತಡೆ ಹಿಡಿದಿದ್ದು ಏಕೆ?
ಅಕ್ಕಿ ಬೆಲೆ ಕಳೆದ 1 ವರ್ಷದಲ್ಲಿ ವ್ಯಾಪಕವಾಗಿ ಏರಿಕೆ , ಈ ಸಲ ಮುಂಗಾರು ಕೈಗೊಡುವ ಲಕ್ಷಣ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಸಾಕಷ್ಟುಅಕ್ಕಿಯನ್ನು ರಾಜ್ಯಗಳಿಗೆ ಪೂರೈಕೆ ಮಾಡುವ ಹೊಣೆಗಾರಿಕೆ- ಈ 3 ಅಂಶಗಳು ಕೇಂದ್ರವು ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನಿರಾಕರಿಸಲು ಪ್ರಮುಖ ಕಾರಣ.
1 ವರ್ಷದಲ್ಲಿ ಅಕ್ಕಿ ಬೆಲೆ ಶೇ.10ರಿಂದ 15ರಷ್ಟುಏರಿದೆ. ಅಲ್ಲದೆ, ಈ ಬಾರಿ ಮುಂಗಾರು ಮಳೆ ಕೊರತೆ ಆಗುವ ಎಲ್ಲ ಭೀತಿ ಇದೆ. ಇದರಿಂದ ಭತ್ತ ಹಾಗೂ ಗೋಧಿ ಬಿತ್ತನೆ ಕುಂಠಿತಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅಕ್ಕಿ-ಗೋಧಿಯ ಅಭಾವ ಸೃಷ್ಟಿಆಗಬಹುದು ಎಂಬುದು ಕೇಂದ್ರ ಸರ್ಕಾರದ ಆತಂಕ. ಅದಕ್ಕೆಂದೇ ಖಾಸಗಿ ಮಾರಾಟಗಾರರ ಬಳಿ ಸಾಕಷ್ಟುಅಕ್ಕಿ ದಾಸ್ತಾನಿದ್ದರೆ ಬೆಲೆ ಏರಿಕೆ ಆಗದು ಹಾಗೂ ಅಕ್ಕಿಯ ಅಭಾವ ಸೃಷ್ಟಿಯಾಗದು ಎಂಬುದು ಕೇಂದ್ರದ ಅನಿಸಿಕೆ.
ಹಾಗೆಯೇ ತನ್ನ ಬಳಿ ಇರುವ ಸೆಂಟ್ರಲ್ ಪೂಲ್‌ನ ಅಕ್ಕಿಯನ್ನು ರಾಜ್ಯ ಸರ್ಕಾರಗಳಿಗೇ ಹೆಚ್ಚಿನ ಪ್ರಮಾಣದಲ್ಲಿ ಮಾರಿದರೆ ಖಾಸಗಿ ಅಕ್ಕಿ ಮಾರಾಟಗಾರರ ಬಳಿ ಅಕ್ಕಿ-ಗೋಧಿಯ ಅಭಾವ ಸೃಷ್ಟಿಆಗಬಹುದು. ಆಗ ಅಕ್ಕಿ-ಗೋಧಿ ಬೆಲೆ ಏರಿಕೆ ಆಗಿ ದೇಶಾದ್ಯಂತ ಜನಾಕ್ರೋಶಕ್ಕೆ ತುತ್ತಾಗಬಹುದು ಎಂದು ಕೇಂದ್ರ ಸರ್ಕಾರ ಕಳವಳ ಹೊಂದಿದೆ. ಹೀಗಾಗಿಯೇ ಖಾಸಗಿ ಸಗಟು ವ್ಯಾಪಾರಿಗಳಿಗೆ ಅಕ್ಕಿಯನ್ನು ಇ-ಹರಾಜು ಮೂಲಕ ನೀಡಲು ಅವಕಾಶ ನೀಡಲಾಗಿದ್ದು, ಸೆಂಟ್ರಲ್ ಪೂಲ್ನಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಅಕ್ಕಿ ಪೂರೈಕೆ ನಿಲ್ಲಿಸಲು ತೀರ್ಮಾನಿಸಿದೆ. ಖುದ್ದು ಕೇಂದ್ರ ಆಹಾರ ಸಚಿವಾಲಯವೇ ಈ ಅಂಶಗಳನ್ನು ಸ್ಪಷ್ಟಪಡಿಸಿದೆ.