ಚಾಮರಾಜನಗರ(ಜೂ.16): ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾದ ಬಿಸಿಸಿಐನ ಅಧ್ಯಕ್ಷ ರೋಜರ್ ಬಿನ್ನಿ ಕೃಷಿಯತ್ತ ಒಲವು ತೋರಿದ್ದು ಚಾಮರಾಜನಗರದಲ್ಲಿ ಟ್ರಾಕ್ಟರ್ ಒಂದನ್ನು ಖರೀದಿ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡವು 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಮಾರಕ ವೇಗಿ ರೋಜರ್ ಬಿನ್ನಿ ಕೃಷಿ ಮೂಲಕ ಇದೀಗ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದು ಗುಂಡ್ಲುಪೇಟೆ ಬಳಿ 45 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಜಿಲ್ಲೆಯ ಶೋ ರೂಂ ನಲ್ಲಿ ಟ್ರಾಕ್ಟರ್ ಖರೀದಿಸಿ ಎಂದು ಬೆಂಗಳೂರಲ್ಲಿ ತಿಳಿಸಿದ್ದರಿಂದ ಚಾಮರಾಜನಗರದ ಮಹೀಂದ್ರಾ ಟ್ರಾಕ್ಟರ್ ಶೋ ರೂಂನಲ್ಲಿ ಇಂದು ರೋಜರ್ ಬಿನ್ನಿ ಟ್ರಾಕ್ಟರ್ ಖರೀದಿ ಮಾಡಿದ್ದಾರೆ.
ನಮ್ಮ ಪೂರ್ವಿಕರು ಕೃಷಿಕರಲ್ಲ, ಆದರೆ ನಾನು ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದು ನಾನು ಗುಂಡ್ಲುಪೇಟೆಯ ಸಮೀಪದಲ್ಲಿ ಜಮೀನು ಖರೀದಿಸಿದ್ದು ಕೃಷಿ ಚಟುವಟಿಕೆಗಾಗಿ ಚಾಮರಾಜನಗರದಲ್ಲಿ ಟ್ರಾಕ್ಟರ್ ಖರೀದಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.