ಭೋಪಾಲ್(ಜೂ.16): 300 ಕಿಲೋಮೀಟರ್ ದೂರ, 400 ಬೆಂಗಾವಲು ವಾಹನ. ಅತೀ ವೇಗದಲ್ಲಿ ಸಿನಿಮಾ ಹೀರೋ ರೀತಿ ಪ್ರಯಾಣಿಸಿ ಬಿಜೆಪಿ ನಾಯಕ ಮರಳಿ ಕಾಂಗ್ರೆಸ್ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಪಕ್ಷಾಂತರ ಪರ್ವ ಜೋರಾಗುತ್ತಿದೆ. ಆದರೆ ಕಳೆದ ಬಾರಿ ಕಮಲ್‌ನಾಥ್ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವು ನೀಡಿದ್ದ ಭೈಜನಾಥ್ ಸಿಂಗ್ ಇದೀಗ ಮತ್ತೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಚುನಾವಣೆ ಬೆನ್ನಲ್ಲೇ ಈ ನಡೆ ಕಾಂಗ್ರೆಸ್ ಶಕ್ತಿ ವರ್ಧಿಸಿದರೆ, ಬಿಜೆಪಿ ತಲೆನೋವು ಹೆಚ್ಚಿಸಿದೆ.
ಭೈಜನಾಥ್ ಸಿಂಗ್ ಮಧ್ಯಪ್ರದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅಂದು ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಭೈಜನಾಥ್ ಸಿಂಗ್ ನೆರವಾಗಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಶಿವಪುರಿ ಕ್ಷೇತ್ರದ ಶಾಸಕ ಭೈಜನಾಥ್ ಸಿಂಗ್ ಶಿವಪುರಿಯಿಂದ ತಮ್ಮ ಬೆಂಬಲಿಗರೊಂದಿಗೆ 400 ಕಾರಿನ ಮೂಲಕ ಭೋಪಾಲ್‌ಗೆ ತೆರಳಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.