ಪ್ರಪಂಚದಾದದ್ಯಂತ ಪ್ರಾಣಿ ಹಿಂಸೆ ಹೆಚ್ಚುತ್ತಿದೆ. ಮಾನವೀಯತೆ ಎಂಬುದು ನಶಿಸಿ ಹೋಗುವ ಹಂತದಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವರ್ಷಗಳ ಹಿಂದೆ ಕೇರಳದಲ್ಲಿ ಯಾರೋ ಒಬ್ಬ ವ್ಯಕ್ತಿ ಹಸಿದು ಆಹಾರವನ್ನರಸಿ ಬಂದ ಗರ್ಭಿಣಿ ಆನೆಗೆ ಅನಾನಸ ಹಣ್ಣಿನಲ್ಲಿ ಪಟಾಕಿಯನ್ನಿಟ್ಟು ತಿನ್ನಿಸಿ ಅದನ್ನು ಸಾಯಿಸಿದ್ದು, ಇದಕ್ಕಿಂತ ದೊಡ್ಡ ಅಮಾನವೀಯ ಘಟನೆ ಇನ್ನೊಂದಿಲ್ಲ. ಇಂತಹ ಕಲ್ಲು ಮನಸ್ಸುಗಳ ನಡುವೆ ಮಾನವೀಯಾ ಗುಣವಿರುವ ಜನರೂ ಇದ್ದಾರೆ. ಕಷ್ಟದಲ್ಲಿ ಸಿಲುಕಿರುವ ಜೀವದ ರಕ್ಷಣೆಗಾಗಿ ಅವರ ಮನ ಮಿಡಿಯುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಒಂದು ಘಟನೆ ನಡೆದಿದ್ದು, ಬೆಂಕಿ ಅವಘಡಕ್ಕೆ ಒಳಗಾದ ಕಟ್ಟಡವೊಂದರ ಮೇಲ್ಛಾವಣಿಯಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಲೆಕ್ಕಿಸದೆ ದೊಡ್ಡ ಕಟ್ಟಡದ ಮೇಲೆ ಏರಿ ನಾಯಿಯನ್ನು ಕಾಪಾಡಿದ್ದಾನೆ. ಈತನ ಈ ಮಾನವೀಯ ಗುಣಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ದೊರಕಿದೆ.
ಈ ಘಟನೆ ಜೂನ್ 9 ರಂದು ಪೆರುವಿನ ಲೀಮಾದಲ್ಲಿ ನಡೆದಿದ್ದು, ಸೆಬಾಸ್ಟಿಯನ್ ಏರಿಯಾಸ್ ಎಂಬ ನಿರಾಶ್ರಿತ ವ್ಯಕ್ತಿ ತನ್ನ ಪ್ರಾಣವನ್ನು ಲೆಕ್ಕಿಸದೆ ಬೆಂಕಿ ಅವಘಡಕ್ಕೆ ಒಳಗಾದ ಕಟ್ಟಡದಲ್ಲಿ ಸಿಲುಕಿದ್ದ 25 ನಾಯಿಗಳನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಇದೀಗ ವೈರಲ್ ಆಗಿರುವ ವೀಡಿಯೋವನ್ನು ಗುಡ್ ನ್ಯೂಸ್ ಮೂವ್ಮೆಂಟ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಹೀರೋ, ಕೊಲಂಬಿಯಾದ ಸೆಬಾಸ್ಟಿಯನ್ ಏರಿಯಾಸ್, ಪೆರುವಿನ ಲಿಮಾದಲ್ಲಿ ಜೂನ್ 9 ರಂದು ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿದ್ದು, ಅದರಲ್ಲಿ ಸಿಲುಕಿದ್ದ 25 ನಾಯಿಗಳನ್ನು ರಕ್ಷಿಸುವ ಸಲುವಾಗಿ ಕಟ್ಟಡದ ಮೇಲೆ ಏರುತ್ತಾನೆ. ಬೆಂಕಿಯ ಜ್ವಾಲೆ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸುವ ಮೊದಲು ಮೆಲ್ಛಾವಣಿಯಲ್ಲಿ ಸಿಲುಕಿದ್ದ ನಾಯಿಯನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ. ಆ ದಿನ ಒಟ್ಟು 25 ನಾಯಿಗಳನ್ನು ರಕ್ಷಿಸಲಾಗಿದೆ’ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ಸೆಬಾಸ್ಟಿಯನ್ ಏರಿಯಾಸ್ ಎಂಬ ವ್ಯಕ್ತಿ ಬೆಂಕಿ ಅವಘಡಕ್ಕೆ ಒಳಗಾದ ಕಟ್ಟಡದ ಮೇಲೆ ಹೊರಭಾಗದಿಂದ ಏರುತ್ತಿರುವುದನ್ನು ಕಾಣಬಹುದು. ಆತ ತನಗೆ ಅಷ್ಟು ದೊಡ್ಡ ಕಟ್ಟಡವನ್ನು ಏರಬೇಕಲ್ಲ ಎಂಬ ಭಯವಿದ್ದರೂ, ಕಟ್ಟಡದಲ್ಲಿ ಸಿಲುಕಿದ್ದ ನಾಯಿಗಳನ್ನು ರಕ್ಷಿಸಲು ಮುಂದಾಗುತ್ತಾನೆ. ಬೆಂಕಿಯ ಭಯಕ್ಕೆ ನಾಯಿಯೊಂದು ಕಟ್ಟಡ ಛಾವಣಿಯ ಮೇಲೆ ಹೋಗಿ ಹೇಗಾದರೂ ತನ್ನ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕೆಂದು ನಿಂತಿರುತ್ತದೆ. ಅಷ್ಟರಲ್ಲಿ ಸೆಬಾಸ್ಟಿಯನ್ ಕಟ್ಟಡದ ಕೋಣೆಯ ಕಿಟಕಿ ಬಾಗಿಲನ್ನು ಮುರಿದು ಅದರ ಮೂಲಕ ಮೇಲ್ಛಾವಣಿಯ ಮೇಲೆ ಏರಿ ನಾಯಿಯನ್ನು ರಕ್ಷಿಸಿ, ಅಗ್ನಿಶಾಮಕ ದಳದ ವಾಹನಕ್ಕೆ ಸುರಕ್ಷಿತವಾಗಿ ಎಸೆಯುತ್ತಾನೆ. ಈತನ ಮಾನವೀಯ ಕಾರ್ಯಕ್ಕೆ ಅಲ್ಲಿ ನೆರೆದಿದ್ದ ಜನರೆಲ್ಲರೂ ಶಿಳ್ಳೆ ಚಪ್ಪಾಳೆಯ ಮೂಲಕ ಆತನಿಗೆ ಪ್ರಶಂಸಿಸುವುದನ್ನು ವೀಡಿಯೋ ದೃಶ್ಯಾವಳಿಯಲ್ಲಿ ಕಾಣಬಹುದು.
ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 188 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಇ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಸೆಬಾಸ್ಟಿಯನ್ ನಿರಾಶ್ರಿತರಾಗಿದ್ದಾರೆ. ಅವರಿಗೆ ವಾಸಿಸಲು ಮನೆ ಮತ್ತು ಒಂದೊಳ್ಳೆ ಉದ್ಯೋಗವನ್ನು ನೀಡಬೇಕಾಗಿದೆ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಏನು ಮಾಡುತ್ತಿದ್ದರು? ಅವರಿಗೆ ಏಣಿಗಳು, ಇತ್ಯಾದಿ ಜೀವರಕ್ಷಕ ಸಾಮಾಗ್ರಿಗಳು ಇರಲಿಲ್ಲವೆ. ಸೆಬಾಸ್ಟಿಯನ್ ಈ ಕಾರ್ಯ ಏಕೆ ಮಾಡಬೇಕಿತ್ತು’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಮಾನವೀಯತೆಯ ಮೇಲಿನ ನನ್ನ ನಂಬಿಕೆಯನ್ನು ಮತ್ತೆ ಹುಟ್ಟಿಸಲು ಈ ಒಬ್ಬ ವ್ಯಕ್ತಿ ಸಾಕು’ ಎಂದು ಬರೆದುಕೊಂಡಿದ್ದಾರೆ. ನಾಲ್ಕನೇ ವ್ಯಕ್ತಿ ಜೀವಗಳನ್ನು ಉಳಿಸಲು ಅವನು ತನ್ನ ಸ್ವಂತ ಭಯವನ್ನು ಬದಿಗಿಟ್ಟಿದ್ದು, ಅದ್ಭುತವಾಗಿತ್ತು’ ಎಂದು ಕಮೆಂಟ್ ಮಾಡಿದ್ದಾರೆ.