ಫಾರ್ಮ್​ನಲ್ಲಿ ಇಲ್ಲದ ನಾಯಕನಿಗೇ ಶಾಕ್ ಕೊಡ್ತು ಬಿಸಿಸಿಐ: ವಿಶ್ರಾಂತಿ ನೆಪದಲ್ಲಿ ರೋಹಿತ್ ಶರ್ಮಾಗೆ ಕೊಕ್?

ಭಾರತ ಕ್ರಿಕೆಟ್ ತಂಡದ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋಲುಂಡ ಬಳಿಕ ತವರಿಗೆ ಮರಳಿದ್ದು ಎಲ್ಲ ಪ್ಲೇಯರ್ಸ್ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಶಾಕ್ ನೀಡಲು ಬಿಸಿಸಿಐ ಮುಂದಾಗಿದೆ. ಭಾರತ ತಂಡ ತನ್ನ ಮುಂದಿನ ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಕೆರಿಬಿಯನ್ನರ ನಾಡಿಗೆ ಟೀಮ್ ಇಂಡಿಯಾ ಪ್ರವಾಸ ಬೆಳೆಸಲಿದ್ದು, ಜುಲೈ 12 ರಿಂದ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಜುಲೈ 12 ರಿಂದ ಭಾರತದ ಮುಂದಿನ ಪಂದ್ಯ ಇರುವ ಕಾರಣ ಆಟಗಾರರು ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಿದ್ದರೂ ಫಾರ್ಮ್​ನಲ್ಲಿ ಇಲ್ಲದ ನಾಯಕ ರೋಹಿತ್ ಶರ್ಮಾ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಟೆಸ್ಟ್ ಅಥವಾ ವೈಟ್-ಬಾಲ್ ಸರಣಿಯಿಂದ ಕೈಬಿಡುವ ಸಾಧ್ಯತೆಯಿದೆ ಎಂದು ವರದಿ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರೋಹಿತ್ ಶರ್ಮಾ ಅವರಿಗೆ ಹೆಚ್ಚುವರಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆಯಂತೆ. 3ಏಕದಿನ ಮತ್ತು 5 ಟಿ20ಗಳನ್ನು ಅಥವಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ರೋಹಿತ್ ಹೊರಗುಳಿಯಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವೆಸ್ಟ್ ಇಂಡೀಸ್ ಈಗ ಬಲಷ್ಠ ತಂಡದಂತೆ ಗೋಚರಿಸುತ್ತಿಲ್ಲವಾದರೂ, ಭಾರತೀಯ ಆಯ್ಕೆ ಸಮಿತಿ ಫಾರ್ಮ್​ನಲ್ಲಿರುವ ಆಟಗಾರರನ್ನು ಕೆರಿಬಿಯನ್ನರ ನಾಡಿಗೆ ಕಳುಹಿಸುವ ಪ್ಲಾನ್​ನಲ್ಲಿರುವಂತೆ ಗೋಚರಿಸುತ್ತಿದೆ. ಇದರ ಒಂದು ಭಾಗವಾಗಿ ರೋಹಿತ್​ಗೆ ವಿಶ್ರಾಂತಿ ನೆಪದಲ್ಲಿ ಕೊಕ್ ನೀಡಲಿದೆ ಎನ್ನಲಾಗಿದೆ.

ಟೀಮ್​ ಇಂಡಿಯಾದ ವೆಸ್ಟ್ ಇಂಡೀಸ್‌ ಪ್ರವಾಸವು ಎರಡು ಟೆಸ್ಟ್‌ಗಳೊಂದಿಗೆ ಪ್ರಾರಂಭವಾಗಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಜುಲೈ 12ರಿಂದ 16 ರವರೆಗೆ ಮೊದಲ ಟೆಸ್ಟ್ ಆಯೋಜಿಸಲಾಗಿದೆ. ಅಂತೆಯೆ ಜುಲೈ 20 ರಿಂದ 24 ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.

ನಂತರ ಮೂರು ಏಕದಿನ ಪಂದ್ಯಗಳ ಸರಣಿಯು ನಡೆಯಲಿದೆ. ಜುಲೈ 27 ಮತ್ತು 29 ರಂದು ಮೊದಲ ಮತ್ತು ಎರಡು ಏಕದಿನ ಪಂದ್ಯಗಳು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಹಾಗೂ ಮೂರನೇ ಏಕದಿನ ಪಂದ್ಯ ಆಗಸ್ಟ್ 1 ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಕೊನೆಯದಾಗಿ ಟಿ20 ಸರಣಿಯು ಆರಂಭಗೊಳ್ಳಲಿದ್ದು, ಆಗಸ್ಟ್ 3 ರಂದು ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಮೊದಲ ಪಂದ್ಯವಿದೆ. ನಂತರ ಆಗಸ್ಟ್ 6 ಮತ್ತು 8 ರಂದು ಎರಡು ಮತ್ತು ಮೂರನೇ ಟಿ20, ಆಗಸ್ಟ್ 12 ರಂದು 4ನೇ ಪಂದ್ಯ, 5 ನೇ ಹಾಗೂ ಅಂತಿಮ ಪಂದ್ಯದ ಆ. 13 ರಂದು ಆಡಲಿದೆ.