ಹಳಿಯಾಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಲ್ಲಿ ವಸ್ತ್ರವಿನ್ಯಾಸ ತರಬೇತಿ ಘಟಕದ ನವೀಕೃತ ಲ್ಯಾಬ್ ಉದ್ಘಾಟನೆ

ಹಳಿಯಾಳ : ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಲ್ಲಿ ವಸ್ತ್ರವಿನ್ಯಾಸ ತರಬೇತಿ ಘಟಕದ ನವೀಕೃತ ಲ್ಯಾಬಿನ ವಿದ್ಯುಕ್ತ ಉದ್ಘಾಟನೆಯು ಇಂದು ಜರುಗಿತು.

ವಸ್ತ್ರವಿನ್ಯಾಸ ತರಬೇತಿ ಘಟಕದ ನವೀಕೃತ ಲ್ಯಾಬನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ನೂತನ ನಿರ್ದೇಶಕರಾದ ಪ್ರಶಾಂತ ಬಡ್ಡಿಯವರು ವಸ್ತ್ರವಿನ್ಯಾಸ ಚಟುವಟಿಕೆಯು ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ನೆಮ್ಮದಿಯ ಬದುಕಿಗೆ ಆಸರೆಯಾಗಿದೆ. ಈ ನವೀಕೃತ ಲ್ಯಾಬ್ ಮತ್ತಷ್ಟು ಸ್ವಾವಲಂಬಿಗಳನ್ನು ನಿರ್ಮಿಸುವ ಕೇಂದ್ರವಾಗಲೆಂದು ಶುಭವನ್ನು ಹಾರೈಸಿದರು.

ವಿ.ಆರ್.ಡಿ.ಎಂ ಟ್ರಸ್ಟಿನ ಧರ್ಮದರ್ಶಿ ಪ್ರಸಾದ್ ದೇಶಪಾಂಡೆಯವರು ಮಾತನಾಡಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಆರ್.ವಿ.ದೇಶಪಾಂಡೆಯವರ ಕನಸಿನ ಕೂಸು. ನಿರುದ್ಯೋಗಿ ಯುವ ಜನತೆಯನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಬೇಕೆಂಬ ಮಹತ್ವದ ಸಂಕಲ್ಪದಡಿ ಈ ಸಂಸ್ಥೆ ಆರಂಭಗೊಂಡಿರುವುದನ್ನು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ್ ಪ್ರಭು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಉಪಸ್ಥಿತರಿದ್ದು, ನೂತನ ಲ್ಯಾಬಿಗೆ ಶುಭ ಕೋರಿದರು.