ಅವರಿಬ್ಬರೂ ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು. ಮುದ್ದಾದ ಮೂರು ಪುಟಾಣಿ ಹೆಣ್ಣು ಮಕ್ಕಳು ಸಹ ಇದ್ರು. ದುಶ್ಚಟಕ್ಕೆ ಬಿದ್ದ ಪತಿ ಪ್ರತಿದಿನ ಪತ್ನಿ ಹಾಗೂ ಮಕ್ಕಳಿಗೆ ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿದ್ದ. ಹೆಂಡತಿ ಮಕ್ಕಳು ಬೇಕು ಎಂದು ನಟಿಸಿ ಪತ್ನಿಯ ಮನೆಗೆ ಬಂದಿದ್ದ ಆ ಕಟುಕ ತಂದೆ ಕೊನೆಗೆ ತನ್ನ ಮಗುವನ್ನೇ ಕುತ್ತಿಗೆ ಹಿಸುಕಿ ಸಾಯಿಸಿಬಿಟ್ಟಿದ್ದಾನೆ. ಮಗುವಿನ ಶವದ ಎದುರು ಮುಗಿಲು ಮುಟ್ಟುವಂತೆ ತಾಯಿ ಹಾಗೂ ಸಂಬಂಧಿಕರ ಆಕ್ರಂದನ, ಏನಾಗ್ತಿದೆ ಅಂತ ಅರಿಯದೆ ಆಟವಾಡ್ತಿರುವ ಎರಡು ಪುಟಾಣಿ ಮಕ್ಕಳು, ನಿರ್ಜನ ಪ್ರದೇಶದಲ್ಲಿ ಹೆತ್ತ ತಂದೆಯಿಂದಲೆ ಕೊಲೆಯಾಗಿ ಸತ್ತು ಬಿದ್ದಿರುವ ಎರಡು ವರ್ಷ ವಯಸ್ಸಿನ ಮಗು . ಇಂಥಾ ಕರುಣಾಜನಕ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ .
ಹೌದು ಆಂಧ್ರದ ಗಡಿಭಾಗದಿಂದ ಕೇವಲ ಒಂದೇ ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಈ ಫೋಟೋದಲ್ಲಿ ಕಿರಾತಕನಂತೆ ಪೋಸ್ ಕೊಟ್ಟಿರುವ ಇವನ ಹೆಸರು ಗಂಗಾಧರ ಅಂತಾ, ವಯಸ್ಸು 30 ವರ್ಷ. ಇವನು ಮಾಡಿರುವ ನೀಚ ಕೆಲಸವನ್ನು ಯಾವ ಮನುಷ್ಯನೂ ಸಹಿಸೋದಿಲ್ಲ.
ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಗಂಗಾಧರ ಕುಡಿತದ ದಾಸನಾಗಿ ಸದಾ ಎಣ್ಣೆ ಮತ್ತಿನಲ್ಲಿ ಇರುತ್ತಿದ್ದ. ನಿತ್ಯ ಕುಡಿದು ಮನೆಗೆ ಬರೋದು ತನ್ನ ಪತ್ನಿ ರೇಣುಕಾ ಹಾಗೂ ಮೂವರು ಮಕ್ಕಳನ್ನು ಹೊಡೆಯುವುದು ಇವನ ಕಾಯಕವಾಗಿತ್ತು. ಇವನ ಟಾರ್ಚರ್ ತಾಳಲಾರದೆ ತನ್ನ ಮೂರೂ ಮಕ್ಳಳನ್ನು ಕರೆದುಕೊಂಡು ರೇಣುಕಾ, ತನ್ನ ತವರು ಮನೆ ಸೇರಿದ್ದಳು. ತನ್ನ ಅಣ್ಣನ ಆಸೆರೆಯಲ್ಲಿದ್ದು ಕೂಲಿ ಕೆಲಸಕ್ಕೂ ಹೋಗುತ್ತ ತನ್ನ ಮಕ್ಕಳನ್ನು ಸಾಕುತ್ತಿದ್ದಳು.
ಆದ್ರೆ ಪತಿ ಗಂಗಾಧರನಿಗೆ ಅದೇನಾಯ್ತೋ ಗೊತ್ತಿಲ್ಲ, ಭಾನುವಾರ ಏಕಾಏಕಿ ರೇಣುಕಾಳ ಅಣ್ಣನ ಮನೆಗೆ ಬಂದು ನಾನು ಇನ್ಮುಂದೆ ಕುಡಿಯೋದಿಲ್ಲ, ನನ್ನ ಹೆಂಡ್ತಿ ಮಕ್ಕಳನ್ನು ಮನೆಗೆ ಕಳುಹಿಸಿ ಎಂದು ಗೋಗರೆದಿದ್ದಾನೆ. ಇವನ ನಾಟಕವನ್ನು ನಂಬದ ರೇಣುಕಾಳ ಅಣ್ಣ ನೀನು ಯಾರಾದ್ರೂ ದೊಡ್ಡವರನ್ನು ಕರೆದುಕೊಂಡು ಬಂದು ಪಂಚಾಯ್ತಿ ಮಾಡಿ ಹೆಂಡ್ತಿ ಮಕ್ಕಳನ್ನು ಕರೆದುಕೊಂಡು ಹೋಗು ಅಂತ ಹೇಳಿ ಕಳಿಸಿದ್ದಾರೆ.
ಸರಿ ಎಂದು ಹೇಳಿ ಹೋದವನು ಸಂಜೆ ವೇಳೆ ಮಕ್ಕಳಿಗೆ ತಿಂಡಿ ಕೊಸುವ ನೆಪದಲ್ಲಿ ಬಂದು ಎರಡನೇ ಮಗಳು ಅಕ್ಷಿತಾ ಹಾಗೂ ಮೂರನೇ ಮಗು ರಮ್ಯಾಳನ್ನು ಕರೆದುಕೊಂಡು ಅಂಗಡಿಗೆ ಹೋಗಿದ್ದಾನೆ. ನಂತರ ಅಂಗಡಿ ಬಳಿ ಹೋಗುತಿದ್ದಂತೆ ಅಕ್ಷಿತಾಳಿಗೆ ಹೊಡೆಯಲು ಆರಂಭಿಸಿದ್ದಾನೆ. ಆಗ ಭಯಗೊಂಡ ಅಕ್ಷಿತಾ ಮನೆಗೆ ಓಡಿ ಹೋಗಿದ್ದಾಳೆ. ಬಳಿಕ ಮೂರನೇ ಮಗಳು ರಮ್ಯಾಳನ್ನು ಗ್ರಾಮದ ಹೊರಹೊಲಯದಲ್ಲಿರುವ ಜಮೀನಿನ ಬಳಿ ಕರೆದುಕೊಂಡು ಹೋಗಿ ಮಗುವನ್ನು ಕುತ್ತಿಗೆ ಹಿಸುಕಿ ಸಾಯಿಸಿ ಏನೂ ತಿಳಿದವನಂತೆ ಗ್ರಾಮಕ್ಕೆ ವಾಪಸ್ಸು ಬಂದಿದ್ದಾನೆ. ಮಗು ಕಾಣಿಸಿ ಹೆಚ್ಚಿನ ಸಮಯವಾಯ್ತು ಅಂತ ಮನೆಯವರು ವಿಚಾರಿಸಿದಾಗ ಜಮೀನಲ್ಲಿರುವ ಬಾವಿಯ ಪಕ್ಕದಲ್ಲಿ ಮಗು ರಮ್ಯಾಳ ಶವ ಪತ್ತೆಯಾಗಿದೆ. ವಿಷಯ ಗ್ರಾಮದಲ್ಲಿ ತಿಳಿಯುತ್ತಿದಂತೆ ಕಟುಕ ಅಪ್ಪ ಗಂಗಾಧರ ತಲೆಮರಿಸಿಕೊಂಡಿದ್ದಾನೆ.
ಇನ್ನು ಗಂಗಾಧರ ಹಾಗೂ ರೇಣುಕಾ ಇಬ್ಬರೂ ಒಂದೇ ಗ್ರಾಮದವವರು ಆಗಿರೋದ್ರಿಂದ ಒಬ್ಬರಿಗೊಬ್ಬರು ಪ್ರೀತಿಸಿ 9 ವರ್ಷಗಳ ಹಿಂದೆ ಮದುವೆ ಆಗಿದ್ದಾರೆ. 6 ವರ್ಷ ವಯಸ್ಸಿನ ರಕ್ಷಿತಾ, 4 ವರ್ಷ ವಯಸ್ಸಿನ ಅಕ್ಷಿತಾ ಹಾಗೂ ಈಗ ಸತ್ತು ಹೋಗಿರುವ 2 ವರ್ಷ ವಯಸ್ಸಿನ ರಮ್ಯಾ ಅನ್ನೋ ಮಕ್ಕಳು ಇದ್ದಾರೆ. ಮದುವೆಯ ಆರಂಭದಲ್ಲಿ ಸರಿಯಾಗಿ ಬಾಳ್ವೆ ಮಾಡ್ತಿದ್ದ ಗಂಗಾಧರ ಬಳಿಕ ಗ್ರಾಮದ ಅಂಗಡಿಗಳಲ್ಲಿ ಅಕ್ರಮವಾಗಿ ಸಿಗುವ ಎಣ್ಣೆ ಕುಡಿಯುತ್ತಾ ಸದಾ ಬೇರೆಯದ್ದೇ ಲೋಕದ ಗುಂಗಿನಲ್ಲಿ ಇರ್ತಿದ್ದ.
ಸಂಜೆ ಆಗ್ತಿದಂತೆ ಕೂಲಿ ಕೆಲಸ ಮಗಿಸಿಕೊಂಡು ಬಂದು ಕುಡಿದು ಹೆಂಡ್ತಿ ಮಕ್ಕಳನ್ನು ಹೋಡಿಯೋದು ಇವನ ಕೆಲಸವಾಗಿತ್ತು. ಒಂದು ವರ್ಷದ ಹಿಂದೆ ರೇಣುಕಾಳ ಕಿವಿಗೆ ಬಲವಾಗಿ ಹೊಡೆದಿದ್ದನಂತೆ. ಇದರಿಂದ ಆಕೆಗೆ ಈಗಲೂ ಕಿವಿ ಕೇಳಿಸ್ತಿಲ್ಲ. ಹೀಗಾಗಿ ನಿನ್ನ ಸಹವಾಸವೇ ಬೇಡ ಎಂದು ತಾನೇ ಕೂಲಿ ಕೆಲಸಕ್ಕೆ ಹೋಗುತ್ತಾ ಗ್ರಾಮದಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಮೂರು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಳು.