ನವದೆಹಲಿ (ಜೂ.14): ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಕೊನೆಗೊಳ್ಳುವ ಲಕ್ಷಣಗಳೇ ಕಾಣತ್ತಿಲ್ಲ. ಮಂಗಳವಾರ ತಡರಾತ್ರಿ ಮೈಟೆ ಪ್ರಾಬಲ್ಯದ ಕಾಂಗ್‌ಪೋಕಿ ಜಿಲ್ಲೆಯ ಮೇಲೆ ಶಸ್ತ್ರ ಸಜ್ಜಿತ ಉಗ್ರವಾದಿಗಳು ದಾಳಿ ನಡೆಸಿದ್ದಾರೆ. ಇದರಲ್ಲಿ 9 ಗ್ರಾಮಸ್ಥರು ಮೃತಪಟ್ಟರೆ, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ಯಾಧುನಿಕ ಶಸ್ತ್ರಗಳನ್ನು ಹೊಂದಿದ್ದ ಕೆಲವು ಜನರು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇಂಫಾಲ್ ಪೂರ್ವ ಜಿಲ್ಲೆ ಮತ್ತು ಬುಡಕಟ್ಟು ಪ್ರಾಬಲ್ಯದ ಕಾಂಗ್‌ಪೋಕ್ಪಿ ಜಿಲ್ಲೆಯ ಗಡಿಯಲ್ಲಿರುವ ಖಮೆಲೋಕ್‌ನಲ್ಲಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖೈನಲ್ಲಿ ಭದ್ರತಾ ಪಡೆಗಳು ಮತ್ತು ಕುಕಿ ಸಮುದಾಯದ ನಡುವೆ ಎನ್‌ಕೌಂಟರ್ ನಡೆಯಿತು. ಕುಕಿ ಜನರು ಮೈತೆಯ್ ಪ್ರದೇಶಗಳಲ್ಲಿ ಬಂಕರ್‌ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು, ಆಗ ಅವರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಇದಕ್ಕೂ ಮುನ್ನ ಸೋಮವಾರ ರಾತ್ರಿ ಖಮೆನ್ಲೋಕ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, 9 ಮಂದಿ ಗಾಯಗೊಂಡಿದ್ದರು. ಜಿಲ್ಲಾಡಳಿತವು ಇಂಫಾಲ್ ಪೂರ್ವದಲ್ಲಿ ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ಮತ್ತು ಇಂಫಾಲ್ ಪಶ್ಚಿಮದಲ್ಲಿ ಬೆಳಿಗ್ಗೆ 5 ರಿಂದ ಬೆಳಿಗ್ಗೆ 9 ರವರೆಗೆ ಕರ್ಫ್ಯೂ ಸಡಿಲಿಸಿದೆ. ಹಿಂಸಾಚಾರದ ಕಾರಣ, ರಾಜ್ಯದಲ್ಲಿ ಇಂಟರ್ನೆಟ್ ನಿಷೇಧವನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ.
ಮಣಿಪುರ ಹಿಂಸಾಚಾರದ ಕುರಿತು ಈಶಾನ್ಯ ಸಮನ್ವಯ ಮಂಡಳಿಯ ಅಧ್ಯಕ್ಷ ಮತ್ತು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಹಿಮಾಂತ ಬಿಸ್ವಾ ಶರ್ಮ ಅವರು ಮಣಿಪುರದಲ್ಲಿನ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಅಮಿತ್ ಶಾಗೆ ತಮ್ಮ ವರದಿ ನೀಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಣಿಪುರದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಅಗತ್ಯವಾದ ಕ್ರಮಗಳ ಚೌಕಟ್ಟನ್ನು ಸಿದ್ಧಪಡಿಸುವ ಕಾರ್ಯವನ್ನು ಗೃಹ ಸಚಿವರು ಶರ್ಮಾಗೆ ವಹಿಸಿದ್ದರು. ಶರ್ಮಾ ಅವರು ಜೂನ್ 10 ರಂದು ಮಣಿಪುರಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ರಾಜ್ಯದ ಸಿಎಂ ಎನ್ ಬಿರೇನ್ ಸಿಂಗ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಕುಕಿ ಸಮುದಾಯದ ಜನರು ಡ್ರೋನ್‌ಗಳನ್ನು ಬಳಸಿಕೊಂಡು ಮೈತೆಯ್ ಗ್ರಾಮಗಳನ್ನು ಮತ್ತು ಕಾಡಿನಲ್ಲಿ ಅಡಗಿರುವ ಈ ಸಮುದಾಯದ ಜನರನ್ನು ಹುಡುಕುತ್ತಿದ್ದಾರೆ. ಬಿಷ್ಣುಪುರ ಜಿಲ್ಲೆಯ ಫೊಯ್ಗಾಕ್‌ಚಾವೊ ಇಖೈ ಗ್ರಾಮದಲ್ಲಿ ಗ್ರಾಮಸ್ಥರು ಡ್ರೋನ್‌ಗಳನ್ನು ಪತ್ತೆ ಮಾಡಿದ ನಂತರ ಇದು ಬಹಿರಂಗವಾಗಿದೆ. ಈ ಡ್ರೋನ್ ಜೂನ್ 8 ರಂದು ಪತ್ತೆಯಾಗಿದೆ. ಡ್ರೋನ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಮೊಯಿರಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವೀಡಿಯೊ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಮಣಿಪುರದಲ್ಲಿ, ಮಂಗಳವಾರ ಮುಂಜಾನೆ ಆರ್‌ಎಎಫ್ ಸಿಬ್ಬಂದಿ ಮತ್ತೊಮ್ಮೆ ಸಿಂಗಜಮೇ ಯುಮ್ನಮ್ ಲಿಕಾಯ್ ಮತ್ತು ಮೊಯಿರಾಂಗ್ ಖೋಮ್‌ನಲ್ಲಿ ಖಾಸಗಿ ವಾಹನಗಳು ಮತ್ತು ವಸತಿ ಮನೆಗಳ ಗಾಜುಗಳನ್ನು ಒಡೆದು ಹಾಕುತ್ತಿರುವುದು ಕಂಡುಬಂದಿದೆ. ಅದರ ವಿಡಿಯೋ ಹೊರಬಿದ್ದಿದೆ. ವರದಿ ಪ್ರಕಾರ 10 ವಾಹನಗಳ ಗಾಜು ಮತ್ತು ಎರಡು ಮನೆಗಳ ಗಾಜುಗಳನ್ನು ಒಡೆದಿದ್ದಾರೆ. ಈ ಆರ್‌ಎಎಫ್ ಸಿಬ್ಬಂದಿ ಮಂಗಳವಾರ ಬೆಳಗಿನ ಜಾವ 2:20ರ ಸುಮಾರಿಗೆ ಸಿಂಗಜಮೇಯಿಯಿಂದ ಮೊಯಿರಾಂಗ್‌ಖೋಮ್ ಕಡೆಗೆ ಹೋಗುತ್ತಿದ್ದಾಗ ಗಾಜು ಒಡೆದಿದ್ದಾರೆ ಎಂದು ಹೇಳಲಾಗುತ್ತಿದೆ.