ಕಲುಷಿತ ನೀರು ಪ್ರಕರಣ: ತಾಲೂಕಿಗೊಬ್ಬರು ನೋಡಲ್ ಅಧಿಕಾರಿ ನೇಮಿಸುವಂತೆ ಶಿವರಾಜ ತಂಗಡಗಿ ಸೂಚನೆ

ಕೊಪ್ಪಳ: ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ್ದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ತಾಲೂಕಿಗೊಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ತಾಕೀತು ಮಾಡಿದ್ದಾರೆ. ಅಲ್ಲದೇ ಸಚಿವರು ನೋಡಲ್ ಅಧಿಕಾರಿ ನೇಮಿಸಿ ಅವರನ್ನು ಪ್ರತಿ ಹಳ್ಳಿ ಪ್ರವಾಸ ಮಾಡಿ, ಪ್ರತಿ ಹಳ್ಳಿಯ ಸಮಸ್ಯೆ ಬಗ್ಗೆ ಅರಿಯುವಂತೆ ಸೂಚನೆ ನೀಡಿದರು.

ಈ ಬಗ್ಗೆ ಸಭೆ ನಡೆಸಿದ ಸಚಿವ ಶಿವರಾಜ ತಂಗಡಗಿ ಒಂದು ವಾರದಲ್ಲಿ ಜಿಲ್ಲೆಯ ಎಲ್ಲಾ ಹಳ್ಳಿಗಳ ಕುಡಿಯುವ ನೀರಿನ‌ ಸಮಸ್ಯೆ ಬಗೆಹರಿಸಬೇಕು. ಪಿಡಿಓ, ಗ್ರಾಮ ಪಂಚಾಯತ್ ಅಧಿಕಾರಿಗಳ ಮೇಲೆ ಜವಬ್ದಾರಿ ಹಾಕದೆ, ಖುದ್ದು ತಹಶಿಲ್ದಾರರು ಮೇಲಸ್ತುವಾರಿ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.