ಲಂಡನ್: 2023ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಭಾರತದ ವಿರುದ್ಧ 209 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, T20 ವಿಶ್ವಕಪ್, ಚಾಂಪಿಯನ್ ಟ್ರೋಫಿ ಹಾಗೂ ಟೆಸ್ಟ್ ಚಾಂಪಿಯನ್ ಶಿಪ್ ಮೂರು ಫಾರ್ಮ್ಯಾಟ್‌ನಲ್ಲೂ ಚಾಂಪಿಯನ್ ಪಟ್ಟ ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ.
ವಿಶ್ವ ಚಾಂಪಿಯನ್ ಆದ ಆಸೀಸ್ ಐಸಿಸಿಯಿಂದ ಬೃಹತ್ ಮೊತ್ತದ ಬಹುಮಾನ ಪಡೆದುಕೊಂಡಿದೆ. ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ ಆಸೀಸ್ ಬರೋಬ್ಬರಿ 13.2 ಕೋಟಿ ರೂ. ಬಹುಮಾನ ಬಾಚಿಕೊಂಡಿದೆ. ಸತತ 2ನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತು ಸತತ 2ನೇ ಬಾರಿಗೆ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿರುವ ಟೀಂ ಇಂಡಿಯಾ 6.5 ಕೋಟಿ ರೂ. ಬಹುಮಾನ ಪಡೆದಿದೆ.
ಸೋಲಿನ ನಿರಾಸೆ ಅನುಭವಿಸಿದ ಬಳಿಕ ಟೀಂ ಇಂಡಿಯಾ ಆರಂಭಿಕ ಆಟಗಾರ ಶುಭಮನ್ ಗಿಲ್ ಇಷ್ಟಕ್ಕೆ ಮುಗಿದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
2023 ಐಪಿಎಲ್‌ನಲ್ಲಿ ಸೂಪರ್ ಹೀರೋ ಆಗಿ ಗುರುತಿಸಿಕೊಂಡಿದ್ದ ಶುಭಮನ್ ಗಿಲ್ 17 ಪಂದ್ಯಗಳಿಂದ ಬರೋಬ್ಬರಿ 890 ರನ್ ಗಳಿಸಿ ಮಿಂಚಿದರು. ಈ ಮೂಲಕ ವಿರಾಟ್ ಕೊಹ್ಲಿ ನಂತರ ಟಾಪ್-2 ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಆ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ಪಂದ್ಯದಲ್ಲಿ 15 ಎಸೆತಗಳಲ್ಲಿ ಕೇವಲ 13 ರನ್ ರನ್ ಗಳಿಸಿ ಔಟಾಗಿದ್ದರು. ಅಲ್ಪ ಮೊತ್ತಕ್ಕೆ ಔಟಾದ ಕಾರಣಕ್ಕೆ ಟೀಂ ಇಂಡಿಯಾ ಅಭಿಮಾನಿಗಳಿಂದ ‘ಐಪಿಎಲ್ ಹೀರೋ, ಟೀಂ ಇಂಡಿಯಾದಲ್ಲಿ ಜೀರೋ’ ಅಂತಾ ಟ್ರೋಲ್‌ಗೆ ಗುರಿಯಾಗಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ 19 ಎಸೆತಗಳಲ್ಲಿ 18 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಶುಭಮನ್ ಗಿಲ್ 3ನೇ ಅಂಪೈರ್ ತೀರ್ಪಿನಿಂದ ಔಟ್ ಆಗಿ ಬೇಸರದೊಂದಿಗೆ ಪೆವಿಲಿಯನ್‌ಗೆ ತೆರಳಿದ್ದರು.
ಆಸೀಸ್ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಶುಭಮನ್ ಗಿಲ್, 19 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 18 ರನ್ ಗಳಿಸಿದ್ದರು. ಆ ಮೂಲಕ ಉತ್ತಮ ಫಾರ್ಮ್ ಹೊಂದಿದ್ದ ಗಿಲ್, ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸ ಮೂಡಿಸಿದ್ದರು. ಆದರೆ 8ನೇ ಓವರ್ ಮೊದಲ ಎಸೆತದಲ್ಲಿ ಸ್ಕಾಟ್ ಬೋಲೆಂಡ್‌ಗೆ ಶುಭಮನ್ ಗಿಲ್ ಡಿಫೆನ್ಸ್ ಆಡಿದರು. ಆದರೆ ಚೆಂಡು ಬ್ಯಾಟ್ ತುದಿಗೆ ತಗುಲಿ ಸ್ಲಿಪ್ ಕಡೆ ಹಾರಿತು. ಸ್ಲಿಪ್‌ನಲ್ಲಿದ್ದ ಕ್ಯಾಮರೂನ್ ಗ್ರೀನ್ ಎಡಗೈನಲ್ಲಿ ಚೆಂಡನ್ನು ಹಿಡಿದರು. ಆದರೆ, ಚೆಂಡನ್ನು ಮೇಲೆತ್ತುವ ಸಮಯದಲ್ಲಿ ನೆಲಕ್ಕೆ ತಾಕಿಸಿದ್ದು ರಿವೀವ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. 3ನೇ ಅಂಪೈರ್ 5-6 ಬಾರಿ ವಿಡಿಯೋ ರೀಪ್ಲೇ ವೀಕ್ಷಿಸಿದರೂ ಅಂತಿಮವಾಗಿ ಔಟ್ ತೀರ್ಮಾನ ಪ್ರಕಟಿಸಿದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು, ಪ್ರಮುಖ ಕ್ರಿಕೆಟ್ ಆಟಗಾರರು 3ನೇ ಅಂಪೈರ್ ತೀರ್ಪಿಗೆ ಖಂಡನೆ ವ್ಯಕ್ತಪಡಿಸಿದರು.
ಇದೀಗ ಎರಡೇ ಪದಗಳಲ್ಲಿ ಟ್ವೀಟ್ ಮಾಡಿರುವ ಗೀಲ್, ನಾಟ್ ಫಿನಿಷ್ಡ್ (ಇಷ್ಟಕ್ಕೆ ಮುಗಿದಿಲ್ಲ) ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಂಡಿಯಾ ಫ್ಲ್ಯಾಗ್ ಎಮೋಜಿಯೊಂದಿಗೆ ಟೀಂ ಇಂಡಿಯಾ ಗ್ರೂಪ್ ಫೋಟೋವನ್ನೂ ಹಂಚಿಕೊಂಡಿದ್ದಾರೆ.