ದಾಂಡೇಲಿ :ಗಮನ ಸೆಳೆದ ದಾಂಡೇಲಿಗರ ಕಿರುಚಿತ್ರ

ದಾಂಡೇಲಿ : ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆಯನ್ನೇರಿದೆ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೇಳಿದ 5 ಘೋಷಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೆ ಅಳೆದು ತೂಗಿ ಲೆಕ್ಕಚಾರದಲ್ಲಿ ತೊಡಗಿ ಒಂದೊಂದೆ ಘೋಷಣೆಗಳನ್ನು ಕಾಲಮಿತಿಯೊಳಗಡೆ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ನಾಳೆಯಿಂದ ರಾಜ್ಯದ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಇತರೆ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಭಾಗ್ಯ ಸಿಗಲಿದೆ. ಇದನ್ನೆ ವಸ್ತುವಾಗಿಸಿಕೊಂಡು ದಾಂಡೇಲಿ ತಾಲ್ಲೂಕಿನ ಖ್ಯಾತ ಕಲಾವಿದ ತಾಟಗೇರಾದ ಮಹಾಂತೇಶ್ ಅಂಧಕಾರ ಮತ್ತು ಸಂಗೀತ ಗುರು ಪಂ.ಎಸ್.ಚಂದ್ರಶೇಖರ್ ಅವರ ನೇತೃತ್ವದ ತಂಡ ಕಿರು ಚಿತ್ರವೊಂದನ್ನು ನಿರ್ಮಿಸಿ, ಎಲ್ಲರ ಗಮನ ಸೆಳೆದಿದೆ. ತಮ್ಮ ಕುಟುಂಬದ ಸದಸ್ಯರನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ನಿರ್ಮಿಸಲಾಗಿದ್ದು, ಇದೀಗ ಈ ಕಿರುಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡತೊಡಗಿದೆ.

4ನೇ ತರಗತಿ ಓದಿರುವ ಮಹಾಂತೇಶ್ ಅಂಧಕಾರ ಅವರು ರೈತಾಪಿ ಕೆಲಸದ ನಡುವೆಯು ರೇಡಿಯೋದಲ್ಲಿ ಹಾಡುಗಳನ್ನು ಕೇಳುತ್ತಾ, ಕೇಳುತ್ತಾ ಉತ್ತರ ಕನ್ನಡ ಜಿಲ್ಲೆಯಲ್ಲೆ ಜ್ಯೂನಿಯರ್ ರಾಜಕುಮಾರ್ ಎಂಬ ಜನಪ್ರಿಯತೆಗೆ ಪಾತ್ರಾರಾಗಿದ್ದು ಚಂದ್ರಶೇಖರ್.ಎಸ್ ಅವರಂತೂ ಸಂಗೀತವನ್ನೆ ಬದುಕಾಗಿಸಿದವರು, ಉಸಿರಾಗಿಸಿಕೊಂಡವರು. ಒಟ್ಟಿನಲ್ಲಿ ಇವರಿಬ್ಬರ ಜುಗಲ್ ಬಂಧಿಯಲ್ಲಿ ನಿರ್ಮಾಣವಾದ ಕಿರುಚಿತ್ರ ಎಲ್ಲರ ಗಮನ ಸೆಳೆಯತೊಡಗಿದೆ.