ಕಾರು ಕದ್ದಿದ್ದ ವ್ಯಕ್ತಿಗೆ ಗುಂಡು ಹಾರಿಸುವ ಬದಲು ಪೊಲೀಸರು ಆತನ 9 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಇರಾನ್ನಲ್ಲಿ ನಡೆದಿದೆ. ಬಾಲಕನ ತಂದೆ ಕಾರನ್ನು ಕದ್ದು ಮಗನೊಂದಿಗೆ ಪರಾರಿಯಾಗುತ್ತಿದ್ದ, ಆ ವ್ಯಕ್ತಿಯನ್ನು ತಡೆಯಲು ಕಾರಿನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದರು, ಆದರೆ ವ್ಯಕ್ತಿ ಬದಲು ಬಾಲಕನಿಗೆ ಗುಂಡು ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆ ವ್ಯಕ್ತಿಯ ವಿರುದ್ಧ ಸಾಕಷ್ಟು ಆರೋಪಗಳಿದ್ದವು, ಅದರಲ್ಲಿ ಈ ಕಾರು ಕಳ್ಳತನ ಕೂಡ ಒಂದು. ಕಾರು ನಿಲ್ಲಿಸುವಂತೆ ಸಾಕಷ್ಟು ಬಾರಿ ಪೊಲೀಸರು ಕೇಳಿಕೊಂಡರೂ ಆತ ಕಿವಿಗೊಡದೆ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಹಾಗಾಗಿ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಮೊರ್ಟೆಜಾ ಡೆಲ್ಫ್ ಜರೆಗಾನಿ ಎನ್ನುವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಇಂತಹ ಘಟನೆ ಇರಾನ್ನಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್ನಲ್ಲಿ ಇಝೆಹ್ ನಗರದಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ 9 ವರ್ಷದ ಕಿಯಾನ್ ಮೇಲೆ ಗುಂಡು ಹಾರಿಸಲಾಗಿತ್ತು.
ಮೃತ ಮಗುವಿನ ತಂದೆ ಶುಕ್ರವಾರ (ಜೂನ್ 9, 2023) ಕಾರು ಕಳ್ಳತನ ಮಾಡಿ ಪರಾರಿಯಾಗಿದ್ದರು, ಕಾರು ಕಳ್ಳತನದ ಸುಳ್ಳು ದೂರಿನ ಆಧಾರದ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಆ ವ್ಯಕ್ತಿ ದೂರಿದ್ದಾರೆ.