ದೋಷಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿ ಸೇವಾ ನ್ಯೂನ್ಯತೆ: 61,999 ರೂ ದಂಡ ಕೊಡಲು ಅಮೆಜಾನ್ ಕಂಪನಿಗೆ ಆದೇಶ!

ದೋಷಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ಭಾರೀ ದಂಡದೊಂದಿಗೆ ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಧಾರವಾಡ ನಗರದ ಯಾಲಕ್ಕಿ ಶೆಟ್ಟರ ಕಾಲೋನಿಯ ತೇಜಸ್ವಿನಿ ಹುದ್ದಾರ ಎಂಬ ವಿದ್ಯಾರ್ಥಿನಿ ತನ್ನ ವ್ಯಾಸಂಗಕ್ಕಾಗಿ ಅಮೆಜಾನ್‌ ಕಂಪನಿ ಮೂಲಕ ಪೇ ಲೇಟರ್ ವ್ಯವಸ್ಥೆ ಅಡಿ ರೂ. 1,199 ಕಿಮ್ಮತ್ತಿನ ಟ್ಯಾಬ್ ಪೆನ್ ಖರೀದಿಸಿದ್ದರು. ಪಾರ್ಸಲ್ ಬಂದ ಬಳಿಕ ಅದನ್ನು ತೆರೆದು ನೋಡಿದಾಗ ಅದರೊಳಗೆ ಉಪಯೋಗಿಸಿದ ಹಳೆಯ ಟ್ಯಾಬ್ ಪೆನ್ ಇತ್ತು.

ತಕ್ಷಣ ಆ ಸಂಗತಿಯನ್ನು ಅಮೆಜಾನ್ ಕಸ್ಟಮರ್ ಕೇರ್‌ಗೆ ತಿಳಿಸಿದರು. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ದೂರುದಾರರು ಬೇರೊಂದು ಟ್ಯಾಬ್ ಪೆನ್ ಖರೀದಿಸಿ ತಮ್ಮ ವ್ಯಾಸಂಗ ಮುಂದುವರಿಸಿದರು. ದೋಷಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿರುವುದು ಸೇವಾ ನ್ಯೂನ್ಯತೆ ಎಂದು ಬೆಂಗಳೂರಿನ ಅಮೆಜಾನ್ ಹಾಗೂ ಅಪಾರಿಯೋರಿಟೇಲ್ ಕಂಪನಿ ಮೇಲೆ ಕ್ರಮಕ್ಕಾಗಿ ತೇಜಸ್ವಿನಿ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ಸಲ್ಲಿಸಿದ್ದರು.

ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಹಣ ಕೊಟ್ಟು ಹೊಸ ಸರಕನ್ನು ಖರೀದಿಸುವಾಗ ಮಾರುವವರು, ಗ್ರಾಹಕರು ಕೇಳುವ ಒಳ್ಳೆ ಗುಣಮಟ್ಟದ ಹೊಸ ಸರಕನ್ನು ಕೊಡುವುದು ಮಾರಾಟಗಾರರ ಕರ್ತವ್ಯ ಎಂದರು.

ಆದರೆ ಈ ಪ್ರಕರಣದಲ್ಲಿ ಹೊಸ ಸರಕನ್ನು ಸರಬರಾಜು ಮಾಡುವ ಬದಲು ಉಪಯೋಗಿಸಿದ ಮತ್ತು ಹಳೆಯದಾದ ದೋಷಯುಕ್ತ ಸರಕನ್ನು ದೂರುದಾರಳಾದ ವಿದ್ಯಾರ್ಥಿನಿಗೆ ಸರಬರಾಜು ಮಾಡಿದ್ದು ತಪ್ಪು ಎಂದು ಆಯೋಗ ತೀರ್ಪು ನೀಡಿದೆ. ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರಳಿಗೆ ಟ್ಯಾಬ್ ಪೆನ್ನಿನ ಹಣ ರೂ. 1,999 ಕೊಡಬೇಕು ಮತ್ತು ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರು. 50 ಸಾವಿರ ರೂಪಾಯಿ ಪರಿಹಾರ ಮತ್ತು 10 ಸಾವಿರ ರೂಪಾಯಿ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎರಡು  ಕಂಪನಿಗಳಿಗೆ ಆಯೋಗ ಆದೇಶ ನೀಡಿದೆ.