ಬೊಮ್ಮಾಯಿ ಹೇಳಿದರೆ ವರುಣಾ ತಾಲೂಕು ಕೇಂದ್ರ ಮಾಡಲು ಆಗಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ವರುಣಾ ತಾಲುಕು ಕೇಂದ್ರ ಮಾಡಿ ಅಂತ ಬಸವರಾಜ ಬೊಮ್ಮಾಯಿ  ಹೇಳಿದರೆ ಮಾಡಲು ಆಗುವುದಿಲ್ಲ. ಜನರು ಕೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಹೆಲಿಪ್ಯಾಡ್​ನಲ್ಲಿ ವರುಣವನ್ನು ತಾಲೂಕು ಕೇಂದ್ರ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬಗ್ಗೆ ಮಾತನಾಡಿದ ಅವರು, ವರುಣವನ್ನು ತಾಲೂಕು ಮಾಡಿ ಎಂದು ಜನರು ಕೇಳಿಲ್ಲ ಎಂದರು.

ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದು. ನಾನು ಪ್ರಚಾರ ಮಾಡುವಾಗಲೂ ತಾಲೂಕು ಮಾಡಿ ಎಂದು ಕೇಳಿಲ್ಲ. ಬಸವರಾಜ ಬೊಮ್ಮಾಯಿ ತಾಲೂಕು ಮಾಡಿ ಎಂದು ಕೇಳಿದರೆ ಮಾಡಲ್ಲ. ಜನ ಕೇಳಿದರೆ ಮಾತ್ರ ವರುಣವನ್ನು ತಾಲೂಕು ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಭರವಸೆ ಈಡೇರಿಸಿದ್ದೇವೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಶಾಂತಿ ಸೌಹಾರ್ದತೆ ಹಾಳಾಗಿತ್ತು. ಕಾರ್ಯಕರ್ತರು ಬಿಜೆಪಿಯ ವೈಫಲ್ಯವನ್ನು ಮನೆ ಮನೆಗೆ ತಿಳಿಸಿದ್ದಾರೆ. ಜನ ಶಕ್ತಿ ಮುಂದೆ ಯಾವ ಶಕ್ತಿಯೂ ತಡೆಯಲು ಸಾಧ್ಯವಾಗುವುದಿಲ್ಲ. ಕರ್ನಾಟಕ ಜನತೆ ತೀರ್ಮಾನದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.

ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸಮಾಜದಲ್ಲಿ ಶಾಂತಿ ವ್ಯವಸ್ಥೆಯನ್ನು ಕಾಪಾಡಿದ್ದಾರೆ. ಕರ್ನಾಕದಲ್ಲಿ ಸುವರ್ಣ ಯುಗ ಪ್ರಾರಂಭವಾಗಿದೆ. 5 ಗ್ಯಾರಂಟಿಗಳು ಘೋಷಣೆ ಮಾಡಿದ್ದೇವೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಉದ್ಯೋಗ ಸೃಷ್ಟಿ, ಕಪ್ಪು ಹಣ ತರುತ್ತೇವೆ, 15 ಲಕ್ಷ ಹಣ, ಚೈನಾದವರು ನಮ್ಮ ದೇಶಕ್ಕೆ ಬರವುವುದನ್ನ ತಡೆಯುತ್ತೇವೆ ಎಂದಿದ್ದರು. ಇದನ್ನು ಬಿಜೆಪಿ ಈಡೇರಿಸಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಬಡವರಿಗೆ, ಅಲ್ಪ ಸಂಖ್ಯಾತರಿಗೆ, ದಲಿತರಿಗೆ ಒಳ್ಳೆ ಆಡಳಿತವನ್ನು ನಮ್ಮ ಮುಖ್ಯಮಂತ್ರಿ ಮಾಡುತ್ತಾರೆ ಎಂದರು.