ದಾಂಡೇಲಿ :ಹಳೆದಾಂಡೇಲಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸ್ಥಳೀಯರು

ದಾಂಡೇಲಿ : ನಗರದ ಹಳೆದಾಂಡೇಲಿಯಲ್ಲಿ ಆಹಾರವನ್ನರಸಿ ಬಂದಿದ್ದ ಜಿಂಕೆಯೊಂದನ್ನು ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಅಲ್ಲೆ ಇರುವ ಸೈಯದ್ ಕಮ್ಯೂನಿಟಿ ಸಭಾಭವನದ ಸಿಬ್ಬಂದಿಗಳು ಸೇರಿ ಬೀದಿ ನಾಯಿಗಳನ್ನು ಓಡಿಸಿ, ಬೀದಿ ನಾಯಿಗಳ ದಾಳಿಗೊಳಗಾದ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಾನವೀಯ ಘಟನೆ ಇಂದು ನಡೆದಿದೆ.

ಹಳೆದಾಂಡೇಲಿಯಲ್ಲಿ ಆಹಾರವನ್ನರಸಿ ಬಂದಿದ್ದ ಜಿಂಕೆಯನ್ನು ಬೀದಿನಾಯಿಗಳು ಬೆನ್ನಟ್ಟಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದವು. ಈ ಸಮಯದಲ್ಲಿ ಸ್ಥಳೀಯರು ಮತ್ತು ಸೈಯದ್ ಸಭಾಭವನದ ಸಿಬ್ಬಂದಿಗಳು ಸೇರಿ ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಿಸಿ, ಸೈಯದ್ ಸಭಾಭವನದಲ್ಲಿ ಇರಿಸಿ, ಉಪಚರಿಸಿ, ಗಾಯಗೊಂಡ ಕಡೆ ಅರಸಿನ ಪುಡಿ ಹಚ್ಚಿ, ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಉಪ ವಲಯಾರಣ್ಯಾಧಿಕಾರಿ ಸಂದೀಪ್ ನಾಯ್ಕ ನೇತೃತ್ವದ ತಂಡ ಜಿಂಕೆಯನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಯನ್ನು ನೀಡಿ, ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.