ವಿಜಯಪುರ: ಕಲಿಕೆಗೆ ವಯಸ್ಸು ಎಂಬುವುದಿಲ್ಲ. ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು ವಿಜಯಪುರದ 81 ವರ್ಷದ ಹಿರಿಯ ನಾಗರಿಕರೊಬ್ಬರು ಪರೀಕ್ಷೆ ಬರೆಯುವ ಮೂಲಕ ತೋರಿಸಿ ಕೊಟ್ಟಿದ್ದಾರೆ.
ನಗರದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ (ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ) ಪರೀಕ್ಷೆಯಲ್ಲಿ ಎಂಎ ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಎಲ್ಲರ ಗಮನ ಸೆಳೆದಿದ್ದಾರೆ. ನಿಂಗಯ್ಯ ಒಡೆಯರ ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಇದಾಗಿದ್ದು, ಅವರಲ್ಲಿ ಓದಿನ ಬಗ್ಗೆ ಇರುವ ಹಂಬಲ ಮತ್ತು ಇಚ್ಛಾಶಕ್ತಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವವರಿಗೆ ಮಾದರಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್‌ಸಿ ಹಳ್ಳಿಯವರಾಗಿರುವ ನಿಂಗಯ್ಯ ಒಡೆಯರ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಣು ಮಗಳಿದ್ದಾಳೆ. ಅಲ್ಲದೇ ಐದು ಜನ ಮೊಮ್ಮಕ್ಕಳಿದ್ದಾರೆ. ಆದರೆ ಇವರ ವಿದ್ಯಾರ್ಜನೆಗೆ ಯಾವುದೂ ಅಡ್ಡಿಯಾಗಿಲ್ಲ. ಇವರ ಮಗಳು ಕೂಡ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇನ್ನು ಗಂಡು ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ತಾ ಲೂಕಿನ ಗುಡೂರು ಬಳಿಯ ಎಸ್‌ಸಿ ಹಳ್ಳಿಯವರಾಗಿರುವ ನಿಂಗಯ್ಯ ಒಡೆಯರ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಣು ಮಗಳಿದ್ದಾಳೆ. ಅಲ್ಲದೇ ಐದು ಜನ ಮೊಮ್ಮಕ್ಕಳಿದ್ದಾರೆ. ಆದರೆ ಇವರ ವಿದ್ಯಾರ್ಜನೆಗೆ ಯಾವುದೂ ಅಡ್ಡಿಯಾಗಿಲ್ಲ. ಇವರ ಮಗಳು ಕೂಡ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇನ್ನು ಗಂಡು ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ಇವರು ಸೇವಾ ನಿವೃತ್ತಿಯ ನಂತರ ಮತ್ತಷ್ಟು ಕಲಿಯಬೇಕು ಎಂಬ ಹಂಬಲದಿಂದ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಇಗ್ನೋದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಇವರು ಪಡೆದಿದ್ದಾರೆ. ಆದರೂ ಇವರಿಗೆ ಓದುವ ಮತ್ತು ಪರೀಕ್ಷೆ ಬರೆಯುವ ಹವ್ಯಾಸ ಮಾತ್ರ ಕಡಿಮೆಯಾಗದಿರುವುದು ಗಮನಾರ್ಹವಾಗಿದೆ.
ತಮ್ಮ ಈ ಸಾಧನೆಗೆ ತಮ್ಮ ಧರ್ಮ ಪತ್ನಿ ಕಾರಣ ಎಂದು ಸಂತಸದಿಂದ ಹೇಳುವ ನಿಂಗಯ್ಯ ಒಡೆಯರ, 81ರ ಇಳಿ ವಯಸ್ಸಿನಲ್ಲಿಯೂ ಯೋಗಪಟುವಾಗಿದ್ದಾರೆ. ವಿಶಿಷ್ಠವಾದ ಸಾಹಸಗಳನ್ನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ನಡೆಯುತ್ತಿರುವ ಸ್ನಾತಕೋತ್ತರ ಪರೀಕ್ಷೆಯಲ್ಲಿ ನಿಂಗಯ್ಯ ಒಡೆಯರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ಇತರ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಇಗ್ನೋ ಅಧ್ಯಯನ ಕೇಂದ್ರದ ಸಂಯೋಜಕ ಡಾ. ನಿಂಗನಗೌಡ ಪಾಟೀಲ್ ಹೇಳಿದ್ದಾರೆ.
ನಿಂಗಯ್ಯ ಒಡೆಯರ ಅವರ ಈ ಹುಮ್ಮಸ್ಸಿನ ಬಗ್ಗೆ ಇಗ್ನೋ ಪ್ರಾಂತ ನಿರ್ದೇಶಕ ಡಾ.ಎ.ವರದರಾಜನ್, ಸಹಾಯಕ ನಿರ್ದೇಶಕ ಡಾ.ಬಿ.ಎನ್.ದೇವೇಂದ್ರ, ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಇಗ್ನೋ ಸಹ ಸಂಯೋಜಕ ಡಾ. ಸತೀಶ್ ನಡಗಡ್ಡಿ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.