ಅಂಕೋಲಾ : ತುಳಸಜ್ಜಿ ಈಗ ಡಾಕ್ಟರ್! ತುಳಸಿ ಗೌಡ; ವೃಕ್ಷಮಾತೆಗೆ ಕೃಷಿ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್

ಅಂಕೋಲಾ: ನಾಡಿನ ವೃಕ್ಷಮಾತೆ, ವನದೇವತೆ ಎಂದೇ ಹೆಸರಾಗಿರುವ ಅರಣ್ಯ ಇಲಾಖೆಯ ಮೂಲಕ ಲಕ್ಷಾಂತರ ಸಸ್ಯಗಳಿಗೆ ಉಸಿರಾಗಿರುವ ಪದ್ಮಶ್ರೀ ತುಳಸಿ ಗೌಡ ಅವರಿಗೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಒಲಿದು ಬಂದಿದೆ.


ಡಾಕ್ಟರೇಟ್ ಪ್ರಧಾನ ಮಾಡಲು ರಾಜ್ಯಪಾಲರು ಹಾಗೂ ವಿಶ್ವ ವಿದ್ಯಾಲಯದ ಕುಲಪತಿ ಥಾವರ್ ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ. ಜೂನ್ 16 ರಂದು ಕೃಷಿ ವಿಶ್ವ ವಿದ್ಯಾಲಯದ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ನಡೆಯಲಿರುವ ವಿಶ್ವ ವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ಪದ್ಮಶ್ರೀ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುತ್ತಿದ್ದು ಈ ಸಂಬಂಧ ವಿಶ್ವವಿದ್ಯಾಲಯದ ಕುಲ ಸಚಿವ ಎಂ ಎಸ್ ಅಂಗಡಿ ಸಮಾರಂಭದಲ್ಲಿ ಹಾಜರಿದ್ದು ಪದವಿ ಸ್ವೀಕರಿಸುವಂತೆ ಆಹ್ವಾನ ಪತ್ರ ನೀಡಿ ಮನವಿ ಮಾಡಿಕೊಂಡಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಭಾರತ ಸರ್ಕಾರದ ಕೃಷಿ ಸಂಶೋಧನಾ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾನ್ ನಿರ್ದೇಶಕ ಡಾ.ಹಿಮಾಂಶು ಪಾಠಕ್, ರಾಜ್ಯ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಕುಲಪತಿ ಡಾ.ಪಿ.ಎಲ್. ಪಾಟೀಲ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಪರಿಸರ ಸಂರಕ್ಷಣೆಗೆ ನೀಡಿದ ವಿಶೇಷ ಕೊಡುಗೆಗಾಗಿ ಈಗಾಗಲೇ ಹಲವು ಗೌರವ ಪ್ರಶಸ್ತಿಗಳನ್ನು ತುಳಸಿ ಗೌಡ ಅವರು ಪಡೆದಿದ್ದಾರೆ. ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲೂ ಅವರ ಜೀವನ ಮತ್ತು ಸಾಧನೆಯ ಕುರಿತು ಪಾಠ ಸೇರ್ಪಡೆ ಮಾಡಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ ತುಳಸಿ ಗೌಡ ಅವರ ಪರಿಸರ ಕಾಳಜಿಯ ಕುರಿತಾದ ಸ್ತಬ್ಧಚಿತ್ರವನ್ನು ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು. ತುಳಸಿ ಗೌಡ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲಿರುವ ತಾಲ್ಲೂಕಿನ ಮೊದಲಿಗರು ಎನ್ನುವುದು ವಿಶೇಷವಾಗಿದೆ.


“ಪಶ್ಚಿಮ ಘಟ್ಟದ ಮಡಿಲಲ್ಲಿ ಹುಟ್ಟಿ, ಚಿಕ್ಕ ವಯಸ್ಸಿನಿಂದಲೇ ಕಾಡಿನ ಮರಗಳೊಂದಿಗೆ ಒಡನಾಟ ಹೊಂದಿದವರು ತುಳಸಿ ಗೌಡ. ಸಸ್ಯಗಳ ಬಗ್ಗೆ ಅಗಾಧ ಜ್ಞಾನ ಬೆಳೆಸಿಕೊಂಡು ಸಸ್ಯ ಸಂರಕ್ಷಣೆಯಲ್ಲಿ ನಿಸ್ವಾರ್ಥ ಸೇವೆ ಗೈದಿರುವ
ಮಹಾನ್ ತಾಯಿಗೆ ಗೌರವ ಡಾಕ್ಟರಟ್ ಒಲಿದು ಬಂದಿರುವುದು ಇಕಾಲಜಿ(ಪರಿಸರ ವಿಜ್ಞಾನ)ಗೆ ಸಂದಿರುವ ಮಹಾನ್ ಗೌರವ” ಎಂದು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಶಿರಸಿ ಕೃಷಿ ಇಲಾಖೆಯ ಅಧಿಕಾರಿ ನಂದೀಶ್ ಆರ್ ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ – ಮಾರುತಿ ಹರಿಕಂತ್ರ