ಉಡುಪಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಸಕಾಲಕ್ಕೆ ಮುಂಗಾರು ಮಳೆಯಾಗದೆ, ರಾಜ್ಯದಲ್ಲಿ ಬರ ಆವರಿಸಿದೆ. ನದಿಗಳು ಬತ್ತುತ್ತಿವೆ. ಭೂಮಿ ಒಣಗುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಸುಮಾರು 400 ಮಕ್ಕಳಿರುವ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯಲು ನೀರಿಲ್ಲ. ಶಾಲೆಯ ಮಕ್ಕಳಿಗೆ ಕುಡಿಯಲು ನೀರು ಕೇಳಿ ಶಾಲೆಯ ಶಿಕ್ಷಕರು ಪಂಚಾಯತ್ಗೆ ಪತ್ರ ಬರೆದಿದ್ದಾರೆ. ಅದರಂತೆ ನೀರಿನ ವಾಹನ ಶಾಲೆಗೆ ಬಂದರೂ ನೀರು ಬಿಟ್ಟಿಲ್ಲ.
ಶಾಲೆ ಶಿಕ್ಷಕರು ಬರೆದ ಪತ್ರ ಕೈ ಸೇರುತ್ತಿದ್ದಂತೆ ಪಂಚಾಯತ್ ಪಿಡಿಓ, ಶಾಲೆಗೆ ನೀರು ಪೂರೈಸಲು ನೀರಿನ ವಾಹನದಲ್ಲಿ ನೀರು ತಲುಪಿಸಿದ್ದಾರೆ. ಆದರೆ ಪಂಚಾಯತ್ ಅಧ್ಯಕ್ಷರು ಶಾಲೆಗೆ ನೀರು ಬಿಡುವುದು ಬೇಡ ಎಂದು ಅಪ್ಪಣೆ ಮಾಡಿದ್ದು ನೀರಿನ ವಾಹನ ವಾಪಾಸ್ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪಂಚಾಯತ್ ಸದಸ್ಯ ನಿನ್ನೆ ನೀರಿನ ವಾಹನ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಗೆ ನೀರು ಬಿಟ್ಟರೆ ಬಿಲ್ ಮಾಡುವುದಿಲ್ಲ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ವಾಹನ ಚಾಲಕ ತಿಳಿಸಿದ್ದಾನೆ. ಅಲ್ಲದೆ ಶಾಲೆಗೆ ನೀರು ಬಿಡದಂತೆ ಪಿಡಿಓ ಮತ್ತು ನೀರಿನ ವಾಹನ ಚಾಲಕನಿಗೆ ಪಂಚಾಯತ್ ಅಧ್ಯಕ್ಷ ವಾರ್ನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಚಾಲಕ ಮತ್ತು ಪಂಚಾಯತ್ ಸದಸ್ಯರ ನಡುವಿನ ಫೋನ್ ಸಂಭಾಷಣೆ ವೈರಲ್ ಆಗಿದೆ. ಪಂಚಾಯತ್ ಸದಸ್ಯ ಪ್ರಶಾಂತ್ ಹರಸಾಹಸ ಪಟ್ಟು ಶಾಲೆಗೆ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ ಹಾಗೂ ವಂಡ್ಸೆ ಪಂಚಾಯತ್ ಅಧ್ಯಕ್ಷರ ಮೇಲೆ ಡಿಸಿಗೆ ದೂರು ನೀಡಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವಿತರಣೆಗಾಗಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ರೇಷನಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಬಜೆ ಡ್ಯಾಂನಲ್ಲಿ ಕುಡಿಯುವ ನೀರಿನ ಶೇಖರಣೆ ತೀರಾ ಕಡಿಮೆ ಇರುವುದರಿಂದ ಪರ್ಕಳ, ಸೆಟ್ಟಿಬೆಟ್ಟು, ಅನಂತನಗರ, ಈಶ್ವರನಗರ, ವಿದ್ಯಾರತ್ನ ನಗರ, ಶೀಂಬ್ರ ಭಾಗಕ್ಕೆ ಜೂನ್ 8 ರ ಬದಲು ಜೂನ್ 9 ರಂದು ನಗರಸಭೆಯ ಕೊಳವೆಯ ಮೂಲಕ ನೀರಿನ ಪೂರೈಕೆ ಮಾಡಲಾಗುವುದು. ನಂತರದಲ್ಲಿ 5 ದಿನಗಳಿಗೊಮ್ಮೆ ಅಂದರೆ, ಜೂನ್ 14 ರಂದು ಕಲ್ಮಾಡಿ, ಕೊಡವೂರು, ದೊಡ್ಡಣಗುಡ್ಡೆ, ಪುತ್ತೂರು ಟ್ಯಾಂಕ್‌ನಿಂದ ಸಂತೆಕಟ್ಟೆ, ಸುಬ್ರಹ್ಮಣ್ಯ ನಗರ ಮತ್ತು ಕೊಡಂಕೂರು ವಾರ್ಡ್ಗಳಿಗೆ ಹಾಗೂ ಜೂನ್ 19 ರಂದು ಇಂದಿರಾನಗರ ಟ್ಯಾಂಕ್, ಅಜ್ಜರಕಾಡು, ಎಸ್.ಪಿ ಟ್ಯಾಂಕ್, ಪುತ್ತೂರು ಟ್ಯಾಂಕ್, ಗೋಪಾಲಪುರ, ಮೂಡುಬೆಟ್ಟು, ಹನುಮಂತನಗರ ಟ್ಯಾಂಕ್‌ನಿಂದ ಹನುಮಂತನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು. ಪ್ರಸ್ತುತ ಹೊಂಡಗಳಿಂದ ನೀರನ್ನು ಪಂಪಿಂಗ್ ಮೂಲಕ ಸರಬರಾಜು ಮಾಡಲಾಗುತ್ತಿರುವುದರಿಂದ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ನಗರಸಭೆಯ ನೀರನ್ನು ಉಪಯೋಗಿಸುತ್ತಿದ್ದಲ್ಲಿ, ನೀರನ್ನು ಕುದಿಸಿ ಕುಡಿಯುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.