ಬಂಗಾರದ ಆಸೆಗೆ ಕಬ್ಬಿನ ಗದ್ದೆಯಲ್ಲಿ ವೃದ್ಧೆಯ ಹತ್ಯೆ: ಆರೋಪಿ ಅಂದರ್​​

ಧಾರವಾಡ: ಬಂಗಾರದ ಆಸೆಗೆ ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಆಲದಕಟ್ಟೆ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹರವಿ ಗ್ರಾಮದ 82 ವರ್ಷದ ತಿಪ್ಪವ್ವ ತಂಬೂರ್ ಮೃತ ವೃದ್ಧೆ. ಗ್ರಾಮದಲ್ಲಾಗಲಿ, ಸುತ್ತಮುತ್ತಲಿನ ಪ್ರದೇಶದಲ್ಲಾಗಲೀ ತಿಪ್ಪವ್ವಳಿಗೆ ಯಾರೂ ಶತ್ರುಗಳೇ ಇರಲಿಲ್ಲ. ಆದರೂ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿದ್ದರ ಬಗ್ಗೆ ಪೊಲೀಸರಿಗೂ ಅಚ್ಚರಿ ಜೊತೆಗೆ ತಲೆನೋವಾಗಿ ಹೋಯಿತು. ಕೂಡಲೇ ಕಲಘಟಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಈ ಸಂದರ್ಭದಲ್ಲಿ ಪೊಲೀಸರಿಗೆ ಯಾವುದೋ ಮೂಲದಿಂದ ಸಣ್ಣದೊಂದು ಮಾಹಿತಿ ಸಿಕ್ಕಿತ್ತು.

ಆ ಮಾಹಿತಿ ಆಧರಿಸಿ ತನಿಖೆ ನಡೆಸಲಾಗಿ ಕೊನೆಗೆ ಅವರು ಬಂದು ನಿಂತಿದ್ದು ಅದೇ ನೆಲ್ಲಿಹರವಿ ಗ್ರಾಮದ ಮಲ್ಲಪ್ಪ ಹುಲ್ಲಂಬಿ ಅನ್ನೋ ವ್ಯಕ್ತಿ ಮನೆ ಮುಂದೆ. ಹಾಗೆ ನೋಡಿದರೆ ಮಲ್ಲಪ್ಪ ಈ ಮೃತ ಅಜ್ಜಿಗೆ ದೊಡ್ಡವ್ವ ದೊಡ್ಡವ್ವ ಅಂತಾನೇ ಕರೆಯುತ್ತಿದ್ದ. ಆಕೆಯೂ ಈತನನ್ನು ತನ್ನ ಮಗನಂತೆಯೇ ಪ್ರೀತಿಸುತ್ತಿದ್ದಳು.

ದೂರದ ಸಂಬಂಧಿಗಳಾಗಿರೋ ಇವರ ನಡುವೆ ತೀರಾನೇ ಪ್ರೀತಿ-ವಿಶ್ವಾಸವಿತ್ತು. ಆದರೆ ತನ್ನ ಮಗಳಿಗೆ ಅರ್ಧ ತೊಲೆ ಬಂಗಾರ ಕೊಡಬೇಕೆನ್ನೋ ಮಲ್ಲಪ್ಪನ ಆಸೆ ಇಂಥದ್ದೊಂದು ಕೃತ್ಯವನ್ನು ಮಾಡಿಸಿಬಿಟ್ಟಿದೆ. ಅಜ್ಜಿಗೆ ಮೊದಲಿನಿಂದಲೂ ಹೊರಗಡೆ ತಿರುಗಾಡುವ ಹವ್ಯಾಸವಿತ್ತು. ಮೇ 27 ರಂದು ಅಜ್ಜಿ ಬೆಳಿಗ್ಗೆ 9 ಗಂಟೆಗೆ ಬಸ್ ಮೂಲಕ ಕಲಘಟಗಿ ಪಟ್ಟಣಕ್ಕೆ ಹೋಗಿದ್ದಾಳೆ. ಅಲ್ಲಿ ತನ್ನ ಕೆಲಸ ಮುಗಿಸಿಕೊಂಡು ಮರಳಿ ಬಸ್​ನಲ್ಲಿ ಆಲದಕಟ್ಟೆ ಕ್ರಾಸ್​ನಲ್ಲಿ ಇಳಿದಿದ್ದಾಳೆ.

ಈಕೆಯ ಹಿಂದೆಯೇ ಬೆಳಿಗ್ಗೆಯಿಂದ ಮಲ್ಲಪ್ಪ ಫಾಲೋ ಮಾಡಿದ್ದಾನೆ. ಆಕೆ ಇಳಿದ ಕೂಡಲೇ ತಾನೂ ಅಲ್ಲಿಯೇ ಇಳಿದಿದ್ದಾನೆ. ಬಳಿಕ ತನ್ನ ಹೊಲ ಇಲ್ಲಿಯೇ ಇದ್ದು, ಒಂದಷ್ಟು ಮಾವಿನಕಾಯಿ ಕೊಡೋದಾಗಿ ಹೇಳಿ ಹೊಲದೊಳಗೆ ಕರೆದೊಯ್ದಿದ್ದಾನೆ. ಅಲ್ಲಿಗೆ ಹೋಗುತ್ತಲೇ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ತಿಪ್ಪವ್ವಳ ಕುತ್ತಿಗೆ ಕೊಯ್ದಿದ್ದಾನೆ. ಹಿರಿ ಜೀವ ಸ್ಥಳದಲ್ಲೇ ಮೃತಪಟ್ಟಿದೆ. ಬಳಿಕ ಆಕೆಯ ಶವವನ್ನು ಕಬ್ಬಿನ ಗದ್ದೆಯ ಮಧ್ಯೆ ಎಳೆದೊಯ್ದು, ಆಕೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಹಾಗೂ ಕಿವಿಯೋಲೆಯನ್ನು ಬಿಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಸುಮಾರು ಹತ್ತು ದಿನಗಳ ಬಳಿಕ ಪೊಲೀಸರು ಈ ಪ್ರಕರಣವನ್ನು ಬೇಧಿಸಿ, ಮಲ್ಲಪ್ಪನನ್ನು ಜೈಲಿಗೆ ಅಟ್ಟಿದ್ದಾರೆ.

ಈ ಮಧ್ಯೆ ಕೊಲೆಗೆ ಮತ್ತೊಂದು ಕಾರಣದ ಬಗ್ಗೆಯೂ ಅನುಮಾನ ಕೇಳಿ ಬಂದಿದೆ. ತಿಪ್ಪವ್ವ ಮಲ್ಲಪ್ಪನಿಗೆ ಹತ್ತು ಸಾವಿರ ರೂಪಾಯಿ ಸಾಲ ನೀಡಿದ್ದಳಂತೆ. ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಪದೇ ಪದೇ ಅಜ್ಜಿ ಕೇಳುತ್ತಲೇ ಇದ್ದಳಂತೆ. ಯಾವಾಗ ಹಣ ಕೊಡದಾದನೋ ಆಗ ಮನೆಯ ಬಳಿ ಕುಳಿತು ಜೋರಾಗಿ ಜಗಳ ಮಾಡುತ್ತಿದ್ದಳಂತೆ. ಈ ಹಿನ್ನೆಲೆಯಲ್ಲಿಯೂ ಕೊಲೆ ನಡೆದಿರಬಹುದು ಅಂತಾ ಶಂಕಿಸಲಾಗಿದೆ. ಒಟ್ಟಿನಲ್ಲಿ ಸಣ್ಣದೊಂದು ಆಸೆಗಾಗಿ ಹಿರಿಯ ಜೀವವನ್ನು ಬಲಿ ಪಡೆದಾತನಿಗೆ ಸರಿಯಾದ ಶಿಕ್ಷೆಯಾಗಬೇಕಿದೆ.