ನಮ್ಮ ಬಹುತೇಕ ಹಣಕಾಸು ವಹಿವಾಟುಗಳಿಗೆ UPIಮಾದರಿ ಪಾವತಿ ವ್ಯವಸ್ಥೆ ಬಳಸುತ್ತೇವೆ. ಎಲೆಕ್ಟ್ರಿಕ್ ಬಿಲ್ನಿಂದ ಹಿಡಿದು ಖಾತೆಯಿಂದ ಖಾತೆಗೆ ಹಣ ವರ್ಗಾವಣೆವರೆಗೂ ನಾವು ಯುಪಿಐ ಬಳಸುತ್ತೇವೆ. 10 ರುಪಾಯಿ ಸಾಮಾನು ಖರೀದಿಗೂ ನಾವು ಯುಪಿಐ ಮುಖಾಂತರವೇ ಹಣ ಪಾವತಿ ಮಾಡುವುದಿದೆ. ಈಗ ಷೇರು ಮಾರುಕಟ್ಟೆಗೆ ಅಡಿ ಇಡಲು ಮುಂದಾಗುವ IPO ದ ಷೇರುಗಳನ್ನು ಖರೀದಿಸಲೂ ಯುಪಿಐ ಬಳಸಬಹುದಾಗಿದೆ. ನೀವು ಐಪಿಒ ಖರೀದಿಸಲು ಅರ್ಜಿ ಸಲ್ಲಿಸುವಾಗ ಯುಪಿಐ ಐಡಿ ನೀಡಬೇಕಾಗುತ್ತದೆ. ನೀವು ಯುಪಿಐ ಮೂಲಕ 5 ಲಕ್ಷ ರೂ ಮೊತ್ತದಷ್ಟು ಐಪಿಒಗಳನ್ನು ಖರೀದಿಸಬಹುದು. ಹಿಂದೆ ಈ ಮೊತ್ತ ಕಡಿಮೆ ಇತ್ತು. ಈಗ ಸೆಬಿ ಇದರ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಿದೆ.
ನೀವು ಐಪಿಒ ಖರೀದಿಗೆ ಅರ್ಜಿ ಹಾಕಿದಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಷ್ಟು ಮೊತ್ತದ ಹಣವು ಫ್ರೀಜ್ ಅಥವಾ ಬ್ಲಾಕ್ ಆಗುತ್ತದೆ. ಒಂದು ವೇಳೆ ನಿಮಗೆ ಐಪಿಒ ಅಲಾಟ್ ಆದರೆ ಆಗ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾದ ಹಣವು ಕಡಿತಗೊಂಡು ನಿಮ್ಮ ಡೀಮ್ಯಾಟ್ ಖಾತೆಗೆ ವರ್ಗವಾಗುತ್ತದೆ. ಒಂದು ವೇಳೆ ನಿಮಗೆ ಐಪಿಒ ಸಿಗದೇ ಹೋದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾಗಿದ್ದ ಹಣವು ಅನ್ಬ್ಲಾಕ್ ಆಗಿ ನಿಮಗೆ ಲಭ್ಯ ಇರುತ್ತದೆ.
ಯುಪಿಐ ಬಳಸಿ ಐಪಿಒಗೆ ಅರ್ಜಿ ಹಾಕುವುದು ಹೇಗೆ?
- ಮೊದಲು ನೀವು ಯುಪಿಐಗೆ ರಿಜಿಸ್ಟರ್ ಆಗಿರಬೇಕು. ಅಂದರೆ ನೀವು ಗೂಗಲ್ ಪೇ, ಪೇಟಿಎಂ ಇತ್ಯಾದಿ ಯುಪಿಐ ಪೇಮೆಂಟ್ ಪ್ಲಾಟ್ಫಾರ್ಮ್ ಹೊಂದಿರಬೇಕು. ಯುಪಿಐಗೆ ಎನೇಬಲ್ ಆದ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.
- ಐಪಿಒ ಅಪ್ಲಿಕೇಶನ್ ಫಾರ್ಮ್ನಲ್ಲಿ ನಿಮ್ಮ ಯುಪಿಐ ಐಡಿಯನ್ನು ನಮೂದಿಸಿರಬೇಕು.
- ಅರ್ಜಿಯಲ್ಲಿ ಇತರೆಲ್ಲಾ ಅಗತ್ಯ ಮಾಹಿತಿ ಭರ್ತಿ ಮಾಡಿ ನಂತರ ಸಲ್ಲಿಸಬೇಕು.
- ಈಗ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಬ್ಲಾಕ್ ಮಾಡಬಹುದಾ ಎಂದು ನಿಮ್ಮ ಯುಪಿಐ ಆ್ಯಪ್ನಲ್ಲಿ ಮನವಿ ಬರುತ್ತದೆ.
- ಈ ಮನವಿಗೆ ನೀವು ಸಮ್ಮತಿಸಿದರೆ ಯುಪಿಐಗೆ ಜೋಡಿತವಾದ ಬ್ಯಾಂಕ್ ಖಾತೆಯಲ್ಲಿ ಆ ಮೊತ್ತದ ಹಣ ಬ್ಲಾಕ್ ಆಗಿರುತ್ತದೆ.
- ನಿಮಗೆ ಐಪಿಒ ಷೇರುಗಳು ವಿತರಣೆ ಆದಾಗ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾಗಿದ್ದ ಹಣ ಡೀಮ್ಯಾಟ್ ಖಾತೆಗೆ ಯುಪಿಐ ಮೂಲಕ ವರ್ಗಾವಣೆ ಆಗುತ್ತದೆ.
- ಐಪಿಒ ಷೇರುಗಳು ನಿಮಗೆ ಸಿಗದೇ ಹೋದಾಗ ಬ್ಯಾಂಕ್ ಖಾತೆಗೆ ನಿಮ್ಮ ಹಣ ಮರಳುತ್ತದೆ.
ಷೇರು ವ್ಯವಹಾರಕ್ಕೆ ಡೀಮ್ಯಾಟ್ ಖಾತೆ ಬೇಕು
ಷೇರುಗಳ ವ್ಯವಹಾರಕ್ಕೆ ಡೀಮ್ಯಾಟ್ ಖಾತೆ ತೆರೆಯುವುದು ಅವಶ್ಯಕ. ಷೇರುಗಳನ್ನು ಖರೀದಿಸಲು ಬ್ಯಾಂಕ್ ಖಾತೆ ಇದ್ದರೆ ಸಾಕಲ್ಲವೆ ಎಂದು ಅನಿಸಬಹುದು. ಆದರೆ, ಬ್ಯಾಂಕ್ ಖಾತೆಗೂ ಡೀಮ್ಯಾಟ್ ಖಾತೆಗೂ ಒಂದು ಪ್ರಮುಖ ವ್ಯತ್ಯಾಸ ಇದೆ. ಬ್ಯಾಂಕ್ ಖಾತೆಯಲ್ಲಿ ನಿಮ್ಮ ನೈಜ ಹಣವು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಅದೇ ರೀತಿ ಡೀಮ್ಯಾಟ್ ಖಾತೆಯಲ್ಲಿ ನಿಮ್ಮ ಷೇರು ಆಸ್ತಿಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹ ಆಗಿರುತ್ತವೆ.