ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31 ವರ್ಷಗಳ ನಂತರ ಜಲ ಕ್ಷಾಮ ಬಂದಿದ್ದು, ಹೊಟೇಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ, ಕಟೀಲು ದೇವಸ್ಥಾನದ ಬಳಿ ಹಾದು ಹೋಗುವ ನಂದಿನಿ ನದಿ ಬತ್ತಿ ಹೋದ ಪರಿಣಾಮ ಮಳೆಗಾಗಿ ದೇವಿಯ ಮೊರೆ ಹೋಗಲಾಗಿದ್ದು, ಇನ್ನೊಂದೆಡೆ, ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಜಿಲ್ಲಾಡಳಿತವು ಎಎಂಆರ್ ಡ್ಯಾಂನಿಂದ ನೀರನ್ನು ಬಿಟ್ಟಿದೆ.
ಕಟೀಲು ದೇವಸ್ಥಾನದ ಬಳಿ ಇರುವ ನಂದಿನಿ ನದಿ ನೀರಿನ ಹರಿವು ಜನವರಿ ತಿಂಗಳಲ್ಲಿ ನಿಂತಿದೆ. ಈ ಬಾರಿ ತುಂಬಾ ನೀರಿನ ಸಮಸ್ಯೆಯನ್ನು ಎದುರಿಸಿದ್ದೇವೆ. ಸದ್ಯ ಕಾಲು ತೊಳೆದು ದೇವಸ್ಥಾನದ ಒಳಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಇರುವ ನೀರಿನ ಲಭ್ಯತೆ ಒಂದು ವಾರದ ತನಕ ಸಾಕಾಗಬಹುದು. ಊಟಕ್ಕೆ ಸದ್ಯ ಹಾಳೆಯ ತಟ್ಟೆಯ ಬಳಕೆ ಮಾಡುತ್ತಿದ್ದೇವೆ. ಕ್ಷೇತ್ರದ ಶಾಲಾ-ಕಾಲೇಜುಗಳಿಗೆ ಬಿಸಿಯೂಟವನ್ನು ನಿಲುಗಡೆ ಮಾಡಿದ್ದೇವೆ. ದೇವರ ಎದುರು ಮಳೆ ಸುರಿಸುವಂತೆ ಪ್ರಾರ್ಥನೆ ಮಾಡಿದ್ದು, ಮಳೆ ಸುರಿಯುವ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರು ಟಿವಿ9ಗೆ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ನಂದಿನಿ ನದಿ ಸಂಪೂರ್ಣ ಬತ್ತಿ ಹೋದ ಹಿನ್ನೆಲೆ ಕಟೀಲು ದೇಗುಲದಿಂದ ನೀಡಲಾಗುತ್ತಿದ್ದ ಶಾಲಾ ಮಕ್ಕಳ ಬಿಸಿಯೂಟವನ್ನು ಸ್ಥತಿತಗೊಳಿಸಿದ್ದಲ್ಲದೆ, ಕಟೀಲು ಕ್ಷೇತ್ರಕ್ಕೆ ಸಂಬಂಧಿಸಿದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಧ ದಿನ ಶಾಲೆ ನಡೆಸಲಾಗುತ್ತಿದೆ. ಕ್ಷೇತ್ರದ ಗೋವುಗಳಿಗೂ ನೀರಿನ ಬರ ಎದುರಾಗಿದ್ದು, ಕ್ಷೇತ್ರದ ಮುಂಭಾಗ ಕಾಲು ತೊಳೆಯುವ ನಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆಯನ್ನು ಹಾಳೆ ತಟ್ಟೆಯಲ್ಲಿ ನೀಡಲಾಗುತ್ತಿದೆ.