ಜೋಯಿಡಾ : ತಾಲ್ಲೂಕಿನ ಫಣಸೋಲಿ ವನ್ಯಜೀವಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ಗಾಂಗೋಡ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಬೀಜದುಂಡೆ ಬಿತ್ತುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿಯವರು ನಾವು ಉಸಿರಾಡಲು ಯೋಗ್ಯ ಗಾಳಿ ಬೇಕಾದರೇ ಹಚ್ಚ ಹಸಿರಿನ ಪರಿಸರವಿರಬೇಕು. ಹಚ್ಚ ಹಸಿರಿನ ಪರಿಸರವಿರಬೇಕಾದರೇ ನಾವು ನೀವೆಲ್ಲರೂ ಪರಿಸರ ಸಂರಕ್ಷಣೆಗಾಗಿ ಕಟಿಬದ್ಧರಾಗಿರಬೇಕೆಂದು ಕರೆ ನೀಡಿ, ಬೀಜದುಂಡೆಯ ಮಹತ್ವವನ್ನು ವಿವರಿಸಿ, ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ ಅದರ ಸಂರಕ್ಷಣೆಯೂ ಅಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಾಂಗೋಡ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರಾದ ಪ್ರವೀಣ್ ದೇಸಾಯಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕ ವೃಂದದವರು, ವನ್ಯಜೀವಿ ಇಲಾಖೆಯ ಉಪ ವಲಯಾರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಜೊತೆಗೆ ಶಾಲೆಯ ಆವರಣ ಮತ್ತು ಶಾಲೆಯ ಹತ್ತಿರದ ಅರಣ್ಯ ಪ್ರದೇಶದಲ್ಲಿ ಬೀಜದುಂಡೆಗಳನ್ನು ಬಿತ್ತನೆ ಮಾಡಲಾಯ್ತು.