ದಾಂಡೇಲಿ : ನಗರದ ಸೋಮಾನಿ ವೃತ್ತದ ಹತ್ತಿರ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.
ಬಾಂಬೂ ಗೇಟ್ ನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸೋಮಾನಿ ವೃತ್ತದ ಹತ್ತಿರ ಸ್ಕಿಡ್ ಆಗಿ ಬಿದ್ದ ಪರಿಣಾಮವಾಗಿ ದ್ವಿಚಕ್ರ ವಾಹನದಲ್ಲಿದ್ದ ಸ್ಥಳೀಯ ಗಾಂಧಿನಗರದ ನಿವಾಸಿ 37 ವರ್ಷ ವಯಸ್ಸಿನ ನೌಷದ್ ಮಹಮ್ಮದ್ ಆಶಮ್ ಸವಣೂರು ಎಂಬಾತನಿಗೆ ಗಂಟಲಿಗೆ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ತಕ್ಷಣವೆ ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿ ನೀಡಿ, ಆಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿ ವಿಪರೀತವಾಗಿ ಆಗುತ್ತಿದ್ದ ರಕ್ತಸ್ರಾವವನ್ನು ತಡೆದು, ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಮಾಹಿತಿಯ ಪ್ರಕಾರ ಸೋಮಾನಿ ವೃತ್ತದಲ್ಲಿ ಬ್ಯಾನರ್ ಒಂದನ್ನು ಹಾಕಲಾಗಿದ್ದು, ಬ್ಯಾನರಿನ ಕೆಳ ತುದಿಗೆ ಎರಡು ಕಡೆಗಳಲ್ಲಿ ಇಟ್ಟಂಗಿ ತುಂಡುಗಳನ್ನು ಕಟ್ಟಿ ಹಾಕಿರುವುದರಿಂದ, ದ್ವಿಚಕ್ರ ವಾಹನ ಬರುತ್ತಿರುವ ಸಂದರ್ಭದಲ್ಲಿ ವಾಹನ ಸವಾರನಿಗೆ ಇಟ್ಟಂಗಿ ಕಾಣದೇ ಇದ್ದದ್ದರಿಂದ ಸ್ಕಿಡ್ ಆಗಿ ಬಿದ್ದು, ಬಿದ್ದ ಸಂದರ್ಭದಲ್ಲಿ ಸೋಮಾನಿ ವೃತ್ತದ ಸುತ್ತಲು ಅಳವಡಿಸಲಾದ ರಾಡ್ ಗಂಟಲಿಗೆ ಬಲವಾಗಿ ತಾಗಿರುವುದರಿಂದ ಗಂಟಲಿಗೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ ಎಂಬ ಮಾಹಿತಿ ಸಧ್ಯಕ್ಕೆ ಲಭ್ಯವಾಗಿದೆ. ಇನ್ನೂ ದ್ವಿಚಕ್ರ ವಾಹನ ಸ್ಕೂಟಿಯಾಗಿದ್ದು, ಅದನ್ನು ಗಾಯಗೊಂಡ ವ್ಯಕ್ತಿ ಚಲಾಯಿಸುತ್ತಿದ್ದನೇ ಇಲ್ಲವೇ ಗಾಯಗೊಂಡ ವ್ಯಕ್ತಿ ಹಿಂಬದಿ ಸವಾರನಾಗಿದ್ದನೇ ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಘಟನೆಗೆ ಅತೀಯಾದ ವೇಗದ ಚಾಲನೆಯೆ ಕಾರಣವಾಗಿರಬಹುದೇ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ತಡವರಿಯದ ಸ್ಪಂದನೆಗೆ ಮತ್ತು ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಸೋಮಾನಿ ವೃತ್ತದಲ್ಲಿ ಯಾವುದೇ ರೀತಿಯ ಬ್ಯಾನರ್, ನಾಮಫಲಕವನ್ನು ಅತೀ ಕೆಳಗೆ ಕಟ್ಟದಂತೆ ನಗರ ಸಭೆಯವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.