ಧಾರವಾಡ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶುಕ್ರವಾರ (ಜೂ.2) ರಾತ್ರಿ ಸಂಭವಿಸಿದ್ದ ಭೀಕರ ತ್ರಿವಳಿ ರೈಲು ಅಪಘಾತಕ್ಕೆ ದೇಶವೇ ಮರುಗುತ್ತಿದೆ. ದುರಂತ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ ದುರಂತದಲ್ಲಿ ಕರ್ನಾಟಕದ 150-160 ಜನ ಸಿಲುಕಿಕೊಂಡಿದ್ದರು. ಪುರಿ ಜಗನ್ನಾಥ್ದಲ್ಲಿ ಇದ್ದವರು 17 ಜನ ವಾಪಸ್ ಬಂದಿದ್ದಾರೆ. 30ಕ್ಕೂ ಹೆಚ್ಚು ವಾಲಿಬಾಲ್ ಆಟಗಾರರನ್ನು ಕರೆತರಲಾಗಿದೆ. ಘಟನೆ ನಡೆದ ರೈಲಿನಲ್ಲಿ ಇದ್ದವರು 110 ಜನ ಜಾರ್ಖಂಡ್ಗೆ ಹೋಗಿದ್ದಾರೆ. ಯಾರಿಗೂ ತೊಂದರೆ ಆಗದಂತೆ 150 ರಿಂದ 160 ಜನರನ್ನ ರಕ್ಷಣೆ ಮಾಡಿದ್ದೇವೆ. ನನ್ನ ಮಾಹಿತಿಯಂತೆ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಿದರು.ಈ ರೈಲು ದುರಂತದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಒಡಿಶಾಗೆ ಕಳುಹಿಸಿದ್ದರು. ಇದೀಗ ಸಂತೋಷ ಲಾಡ್ ಅವರು ರಾಜ್ಯಕ್ಕೆ ವಾಪಾಸ್ ಆಗಿದ್ದಾರೆ.
ಕರ್ನಾಟಕದಲ್ಲಿ ಅತೀ ಶೀಘ್ರದಲ್ಲೇ ಎಮರ್ಜೆನ್ಸಿ ಸರ್ಕಾರ ಬರುತ್ತೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೆ ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಉತ್ತರ ಸಿಗುತ್ತೆ. ಸುಮ್ಮನೆ ಅವರೊಂದು ಹೇಳಿದ್ದಾರೆ, ನಾವೊಂದು ಹೇಳಿದ್ದೇವೆ ಅಂತೇನಿಲ್ಲ. ಅವರು ಅಭಿವೃದ್ಧಿ ಬಡತನದ ಬಗ್ಗೆ ಮಾತನಾಡೋದು ಒಳ್ಳೆಯದು ಎಂದರು.
ಕಾಂಗ್ರೆಸ್ಗೆ ಅಧಿಕಾರದ ಅಮುಲು ಏರಿದೆ ಎಂಬ ಬಿಜೆಪಿ ಹೇಳಿಕೆ ವಿಚಾರವಾಗಿ ಮಾತನಾಡಿ ಮೊನ್ನೆಯಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಒಟ್ಟಾರೆ ನಮ್ಮ ಉದ್ದೇಶ ಸರ್ಕಾರದ ಯೋಜನೆ ಜಾರಿಗೆ ತರುವುದಿದೆ. ಮಾತುಕೊಟ್ಟ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ವಿಶೇಷವಾಗಿ ನಮ್ಮ ಗಮನ ಆ ಕಡೆ ಇರುತ್ತೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಕಲಿ ಜಾಬ್ ಕಾರ್ಡ್ ವಿಚಾರವಾಗಿ ಮಾತನಾಡಿ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಕಲಿ ಜಾಬ್ ಕಾರ್ಡ್ ಇರುವ ಬಗ್ಗೆ ಮಾಹಿತಿ ಬೇಕು. ನಕಲಿ ಜಾಬ್ ಕಾರ್ಡ್ಗೆ ಕೆಲವು ಮಾನದಂಡ ಹಾಕಿದ್ದೇವೆ. ಒಂದು ವೇಳೆ ನಕಲಿ ಅಂತ ಗೊತ್ತಾದರೆ ಅವುಗಳನ್ನ ತೆಗೆಯುತ್ತೇವೆ ಎಂದು ತಿಳಿಸಿದರು.
ಸಂತೋಷ ಲಾಡ್ ಧಾರವಾಡ ಉಸ್ತುವಾರಿ ಆಗ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಜಾರಿಕೊಂಡರು.