ಶಕ್ತಿ’ ಯೋಜನೆಗೆ ಷರತ್ತುಗಳು ಅನ್ವಯ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಬೇಕು ‘ಸ್ಮಾರ್ಟ್ ಕಾರ್ಡ್’, ಇದನ್ನು ಪಡೆಯುವ ಮಾಹಿತಿ ಇಲ್ಲಿದೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ, ಗದ್ದುಗೆ ಏರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಈ ಪೈಕಿ ಸಾರಿಗೆ ಸಂಸ್ಥೆಗಳ ಆಯ್ದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯ ಮಾರ್ಗದರ್ಶಿಯನ್ನು ಸರ್ಕಾರ ಪ್ರಕಟ ಮಾಡಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ತೃತೀಯ ಲಿಂಗಿಗಳು ಎ.ಸಿ ಬಸ್ ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಸುಗಳಲ್ಲಿ ಜೂನ್‌ 11 ರಿಂದ ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಗಲಿದೆ. ಆದ್ರೆ ಸೋಮವಾರ ಪ್ರಕಟವಾದ ಮಾರ್ಗದರ್ಶಿಯ ಪ್ರಕಾರ, ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್‌ ಕಾರ್ಡ್‌ʼ ಹೊಂದುವುದು ಕಡ್ಡಾಯ.

ಏನಿದು ‘ಶಕ್ತಿ’ ಯೋಜನೆ
ಈ ಯೋಜನೆಯಡಿಯಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಸರ್ಕಾರವು ಇತರ ನಾಲ್ಕು ಕಾಂಗ್ರೆಸ್ ಗ್ಯಾರಂಟಿಗಳೊಂದಿಗೆ ಯೋಜನೆಗೆ ತಾತ್ವಿಕ ಅನುಮೋದನೆಯನ್ನು ನೀಡಿತು. ಕರ್ನಾಟಕ ಕ್ಯಾಬಿನೆಟ್ ಜೂನ್ 11 ರಂದು ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತು.

ಉಚಿತ ಬಸ್​ ಸೇವೆ ಪಡೆಯಲು ಯಾರು ಅರ್ಹರು?
ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ ನಿವಾಸಿಗಳಾಗಿರುವ ಎಲ್ಲಾ ಮಹಿಳೆಯರು ಈ ಯೋಜನೆಗೆ ಅರ್ಹರು. ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಕೂಡ ‘ಶಕ್ತಿ’ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಬೇಕು ‘ಶಕ್ತಿ’ ಸ್ಮಾರ್ಟ್ ಕಾರ್ಡ್
ಮುಂದಿನ ಮೂರು ತಿಂಗಳಲ್ಲಿ ಮಹಿಳೆಯರು ಸೇವಾ ಸಿಂಧು ವೆಬ್​ ಸೈಟ್​ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ‘ಶಕ್ತಿ’ ಸ್ಮಾರ್ಟ್ ಕಾರ್ಡ್ ಪಡೆಯಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ಸರ್ಕಾರ ಈ ಕಾರ್ಡ್‌ಗಳನ್ನು ಯಾವಾಗ ವಿತರಿಸಲು ಪ್ರಾರಂಭಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಈ ಕಾರ್ಡ್‌ಗಳನ್ನು ನೀಡುವವರೆಗೆ, ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್‌ ವಿತರಿಸುವ ಸ೦ದರ್ಭದಲ್ಲಿ ಪರಿಗಣಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಜೂನ್ 11 ರಿಂದ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಅನ್ನು ಕೂಡ ಪರಿಗಣಿಸಬೇಕು.

ಉಚಿತ ಬಸ್ ಪ್ರಯಾಣ ಯೋಜನೆಯನ್ನು ಹೇಗೆ ಪಡೆಯುವುದು?
‘ಶಕ್ತಿ’ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವವರೆಗೆ, ಆಧಾರ್ ಕಾರ್ಡ್‌ಗಳು ಸೇರಿದಂತೆ ವಸತಿ ವಿಳಾಸ ಹೊಂದಿರುವ ಫೋಟೋ ಗುರುತಿನ ಚೀಟಿಗಳನ್ನು ಬಸ್ ಪ್ರಯಾಣದ ಸಮಯದಲ್ಲಿ ಕಂಡಕ್ಟರ್‌ಗೆ ತೋರಿಸಲು ಸರ್ಕಾರ ಅನುಮತಿ ನೀಡಿದೆ.

‘ಶಕ್ತಿ’ ಯೋಜನೆ ಜಾರಿಯಾಗುವ ಬಸ್‌ಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಬಸ್​ಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ರಾಜ್ಯದೊಳಗೆ ಸಂಚರಿಸುವ ಈ ನಾಲ್ಕು ಸಾರಿಗೆ ನಿಗಮಗಳಿಗೆ ಸೇರಿದ ಬಸ್‌ಗಳಲ್ಲಿ ‘ಶಕ್ತಿ’ ಯೋಜನೆ ಜಾರಿಯಾಗಲಿದೆ. ಮೇಘದೂತ್ ಬಸ್‌ಗಳಿಗೂ ಉಚಿತ ಬಸ್ ಪಾಸ್ ಯೋಜನೆ ಅನ್ವಯವಾಗಲಿದೆ.

‘ಶಕ್ತಿ’ ಯೋಜನೆಗೆ ಒಳಪಡದ ಬಸ್‌ಗಳು
ರಾಜ್ಯದ ಹೊರಗೆ ಪ್ರಯಾಣಿಸುವ ಬಸ್ಸುಗಳು
ಐಷಾರಾಮಿ ಬಸ್ಸುಗಳು
ಎಸಿ ಮತ್ತು ನಾನ್ ಎಸಿ ಎರಡನ್ನೂ ಒಳಗೊಂಡಂತೆ ಸ್ಲೀಪರ್ ಬಸ್‌ಗಳು
ವಾಯು ವಜ್ರ
ಅಂಬಾರಿ
ಐರಾವತ
ಫ್ಲೈಬಸ್
EV ಪವರ್ ಪ್ಲಸ್ (AC)
‘ಶಕ್ತಿ’ ಯೋಜನೆ ಅನ್ವಯವಾಗುವ ಬಸ್‌ಗಳಲ್ಲಿ ಪುರುಷರಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಸಾರಿಗೆ ನಿಗಮಗಳಿಗೆ ಸರ್ಕಾರ ಹೇಗೆ ಮರುಪಾವತಿ ಮಾಡುತ್ತದೆ?
ಇನ್ನು ರಾಜ್ಯ ಸರ್ಕಾರ ಶೂನ್ಯ ದರದ ಟಿಕೆಟ್ ವಿಚರಿಸಲು ಕಡ್ಡಾಯ ಮಾಡಿದೆ. ಟಿಕೆಟ್​ ಮೇಲೆ ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ’ ಎಂದು ಬರೆದಿರುತ್ತಾರೆ ಮತ್ತು ಟಿಕೆಟ್​ನಲ್ಲಿ ಯಾವುದೇ ಬೆಲೆ ನಮೂದಾಗಿರುವುದಿಲ್ಲ. ಆದ್ರೆ, ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿ ಹಾಕಿರಲಾಗಿರುತ್ತದೆ. ಈ ರೀತಿಯ ಶೂನ್ಯ ದರದ ಟಿಕೆಟ್ ನೀಡುವಂತೆ ನಿರ್ವಾಹಕರಿಗೆ ಕಡ್ಡಾಯಮಾಡಲಾಗಿದೆ.