ದಾಂಡೇಲಿ ತಾಲ್ಲೂಕಿನ ಸಂಗಮ್ ಮೌಳಂಗಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು

ದಾಂಡೇಲಿ : ತನ್ನ ಗೆಳೆಯರೊಂದಿಗೆ ಈಜಲು ತೆರಳಿದ್ದ ಬಾಲಕನೊರ್ವ ನೀರನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ದಾಂಡೇಲಿ ನಗರ ಸಮೀಪದ ಸಂಗಮ್ ಮೌಳಂಗಿಯಲ್ಲಿರುವ ಕಾಳಿ ನದಿಯಲ್ಲಿ ಸೋಮವಾರ ನಡೆದಿದೆ.

ಹಳೆದಾಂಡೇಲಿಯ 15 ವರ್ಷ ವಯಸ್ಸಿನ ರಾವುಫ್ ಮಹಮ್ಮದ್ ರಫೀಕ್ ಪಟೇಲ್ ಎಂಬಾತನೇ ಮೃತಪಟ್ಟ ಬಾಲಕನಾಗಿದ್ದಾನೆ. ಈತ ತನ್ನ ಗೆಳೆಯರೊಂದಿಗೆ ಕೂಡಿಕೊಂಡು ಸಂಗಮ್ ಮೌಳಂಗಿಗೆ ತೆರಳಿದ್ದಾನೆ. ಅಲ್ಲಿ ಹೋದವನು ಗೆಳೆಯರ ಜೊತೆಗೆ ಕಾಳಿ ನದಿಯಲ್ಲಿ ಈಜಾಡಲು ಇಳಿದಿದ್ದಾನೆ. ಈ ಸಮಯದಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ. ನದಿಯಲ್ಲಿ ಮುಳುಗಿದ್ದ ಈತನನ್ನು ತಕ್ಷಣವೆ ಅಲ್ಲೆ ಮೀನು ಹಿಡಿಯಲು ಬಂದಿದ್ದ ಒಬ್ಬರು ನದಿಗೆ ಧುಮುಕಿ ರಕ್ಷಿಸಿದರೂ, ಅಷ್ಟೋತ್ತಿಗಾಗಲೆ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಘಟನೆ ನಡೆದ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರ, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

ಹಳೆದಾಂಡೇಲಿಯ ಬಾಡಿಗೆ ಮನೆಯೊಂದರಲ್ಲಿ ತಾಯಿ, ತಮ್ಮ ಮತ್ತು ತಂಗಿಯ ಜೊತೆ ವಾಸವಿದ್ದ ಈ ಬಾಲಕ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.