ಬಾಲಸೋರ್ ಜಿಲ್ಲೆಯಲ್ಲಿ ಅಪಘಾತ ನಡೆದಿದ್ದ 3 ದಿನಗಳ ಬಳಿಕ ಮತ್ತೊಂದು ಅವಘಡ ಸಂಭವಿಸಿದೆ. ಈ ಬಾರಿ ಗೂಡ್ಸ್ ರೈಲು ಹಳಿ ತಪ್ಪಿದೆ ಗೂಡ್ಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.
ನವದೆಹಲಿ (ಜೂನ್ 5, 2023): ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಕನಿಷ್ಠ 275 ಜನ ಮೃತಪಟ್ಟಿದ್ದು, 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ತ್ರಿವಳಿ ರೈಲು ದುರಂತದಿಂದ ರೈಲ್ವೆ ಇಲಾಖೆ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ. ಆದರೆ, ಈ ನಡುವೆ ಒಡಿಶಾದಲ್ಲಿ ಮತ್ತೊಂದು ಅವಘಡ ನಡೆದಿದೆ. ಮತ್ತೊಂದು ರೈಲು ಹಳಿ ತಪ್ಪಿದೆ.
ಹೌದು, ಒಡಿಶಾದ ಬರ್ಗಢ ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿದೆ. ಬಾಲಸೋರ್ ಜಿಲ್ಲೆಯಲ್ಲಿ ಅಪಘಾತ ನಡೆದಿದ್ದ 3 ದಿನಗಳ ಬಳಿಕ ಮತ್ತೊಂದು ಅವಘಡ ಸಂಭವಿಸಿದೆ. ಈ ಬಾರಿ ಗೂಡ್ಸ್ ರೈಲು ಹಳಿ ತಪ್ಪಿದೆ. ಗೂಡ್ಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ. ಅದರೆ, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.
ಇನ್ನು, ಈ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಇಲಾಖೆ, ಇದು ಖಾಸಗಿ ರೈಲು ಹಳಿಯಾಗಿದ್ದು, ಈ ಹಿನ್ನೆಲೆ ಇದರಿಂದ ರೈಲು ಸಂಚಾರಕ್ಕೆ ಯಾವುದೇ ಅಸ್ತವ್ಯಸ್ತವಾಗಿಲ್ಲ. ಇದು ಸಿಮೆಂಟ್ ಕಂಪನಿಯ ರೈಲು ಎನ್ನಲಾಗಿದ್ದು, ಅವರದ್ದೇ ಪ್ರತ್ಯೆಕ ಹಳಿಯಾಗಿದ್ದು, ಈ ಹಿನ್ನೆಲೆ ದೇಶದ ಇತರೆ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.