ಜಿಲ್ಲಾ ಕಸಾಪದಿಂದ ನಗರದ ಸಾಹಿತ್ಯ ಭವನದಲ್ಲಿ ನಾಲ್ವಡಿ ಕಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ
ದಾಂಡೇಲಿ :ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವಾರು ಮಹತ್ವದ ಸಂಸ್ಥೆಗಳನ್ನು ಪ್ರಾರಂಭಿಸಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಈ ನಾಡಿಗೆ ಅಪಾರವಾಗಿದೆ ಎಂದು ಬರಹಗಾರ ಹಾಗೂ ಚಿಂತಕ ಡಾ. ಬಿ. ಪಿ. ಮಹೇಂದ್ರ ಕುಮಾರ್ ನುಡಿದರು.
ಅವರು ಇಂದು ಭಾನುವಾರ ಸಂಜೆ 4.30 ಗಂಟೆಗೆ ದಾಂಡೇಲಿಯ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಕೃಷ್ಣರಾಜಸಾಗರ ಆಣೆಕಟ್ಟು, ಮಹಾರಾಣಿ ಕಾಲೇಜು , ನಿಮಾನ್ಸ್ ಆಸ್ಪತ್ರೆ, ಬನಾರಸ್ ಹಿಂದೂ ಮಹಾವಿದ್ಯಾಲಯ, ಶಿವನಸಮುದ್ರ ಜಲವಿದ್ಯುತ್ ಯೋಜನೆ, ವಾಣಿವಿಲಾಸ ಆಣೆಕಟ್ಟು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುವರಾಜ ಕಾಲೇಜು, ಮೈಸೂರು ರಾಜ್ಯ ರೈಲ್ವೆ, ಮೈಸೂರು ಮೆಡಿಕಲ್ ಕಾಲೇಜು, ಉಕ್ಕಿನ ಉದ್ಯಮ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಆರಂಭಿಸಿದವರು. ಜೊತೆಗೆ ಮೊಟ್ಟ ಮೊದಲ ಬಾರಿಗೆ ದಾರಿದೀಪವನ್ನು ಹಾಗೂ ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯುತನ್ನು ರಾಜ್ಯಕ್ಕೆ ತಂದವರು. ಈ ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತರ , ಬುಡಕಟ್ಟುಗಳ, ಶೋಷಿತರ ಪರವಾಗಿದ್ದ ನಿಲುವನ್ನು ಹೊಂದಿದ್ದರು. ಆಧುನಿಕ ಭಾರತಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯವಾಗಿಯೂ ಕೂಡ ಕಾಳಜಿ ಉಳ್ಳವರಾಗಿದ್ದರು. ಇಂತಹ ಮಹನೀಯರನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ಮರಿಸಿಕೊಳ್ಳುವುದು ಔಚಿತ್ಯಪೂರ್ಣವಾದದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆಯವರು ಶತಮಾನಗಳ ಇತಿಹಾಸವನ್ನು ಹೊಂದಿರುವ ಕನ್ನಡಿಗರ ಪ್ರಾಧಿನಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರವರೇ ಮೂಲ ಪ್ರೇರಣದಾಯಿಗಳು. ಅವರು ಹುಟ್ಟು ಹಾಕಿದ ಪರಿಷತ್ತು ಇಂದು ದೇಶದ ದೊಡ್ಡ ನುಡಿ ಸಂಘಟನೆಯಾಗಿ ಬೆಳೆದು ನಿಂತಿದೆ. ಅವರು ಕಟ್ಟಿ ಬೆಳೆಸಿದ ಹಲವಾರು ಸಂಸ್ಥೆಗಳು ಇಂದು ಕನ್ನಡ ನಾಡಿಗೆ ಮಹತ್ವದ ಕೊಡುಗೆಗಳಾಗಿವೆ. ಇಂತಹ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಎಂ. ಆರ್. ನಾಯಕ, ಜೋಯಿಡಾ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ್, ಗೌರವಕೋಶದಕ್ಷ ಶ್ರೀಮಂತ ಮಾದರಿ, ಸಾಹಿತಿಗಳಾದ ಪ್ರವೀಣ ಜಿ. ನಾಯಕ, ನಾಗರೇಖಾ ಗಾಂವಕರ, ಭೀಮಾಶಂಕರ್ ಅಜನಾಳ, ಎ. ಆರ್. ಗೌಡ, ಪ್ರವೀಣಕುಮಾರ್ ಸುಲಾಕೆ, ಅಶ್ವಿನಿ ಸಂತೋಷ್ ಶೆಟ್ಟಿ, ವೆಂಕಮ್ಮ ನಾಯಕ, ಜಲಜಾ ಬಿ. ವಾಸರೆ ಪ್ರಮುಖರಾದ ಸುರೇಶ್ ಪಾಲನಕರ್, ಕಲ್ಪನಾ ಪಾಟೀಲ್, ಸುರೇಶ್ ಕಾಮತ್, ಸುಭಾಸ್ ನಾಯಕ, ಚಂದ್ರಕಾಂತ ನಡಿಗೇರ, ಅಕ್ಷಯಗಿರಿ ಗೋಸಾವಿ, ರಾಜೇಶ ತಳೇಕರ, ಧನಾಜಿ ಕಾಂಬಳೆ, ಫಿರೋಜ ಫಿರ್ಜಾದೆ ಮುಂತಾದವರಿದ್ದರು.
ಮಾನಸಾ ವಾಸರೆ ಆಶಯ ಗೀತೆ ಹಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ,ಆನೆಹೊಸೂರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಬೈಟ್ : ಡಾ.ಬಿ.ಪಿ.ಮಹೇಂದ್ರಕುಮಾರ್, ಚಿಂತಕರು, ದಾಂಡೇಲಿ