ದಾಂಡೇಲಿ : ನಗರದ ಹಿರಿಯ ಅರಣ್ಯ ಗುತ್ತಿಗೆದಾರರು ಮತ್ತು ಹಿರಿಯ ಸಮಾಜ ಸೇವಕರಾದ ಅನಿಲ್ ಮಾಡ್ದೋಳ್ಕರ್ ಅವರು ವಿಧಿವಶರಾದರು. ಮೃತರಿಗೆ 66 ವರ್ಷ ವಯಸ್ಸಾಗಿತ್ತು.
ನಗರದ ಲೆನಿನ್ ರಸ್ತೆಯ ನಿವಾಸಿಯಾಗಿದ್ದ ಅನಿಲ್ ಮಾಡ್ದೋಳ್ಕರ್ ಅವರು ಅರಣ್ಯ ಗುತ್ತಿಗೆದಾರರಾಗಿ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿಯೂ ಗುತ್ತಿಗೆದಾರರಾಗಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಗೊಂಡು ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.
ಮೃತರು ಪತ್ನಿ, ನಾಲ್ವರು ಸಹೋದರರು, ಇಬ್ಬರು ಸಹೋದರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಸದಾ ನೆರವು ನೀಡುವ ಮೂಲಕ ಅನಿಲ್ ಮಾಡ್ದೋಳ್ಕರ್ ಅವರು ಗಮನ ಸೆಳೆದಿದ್ದರು. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.