ಜೋಯಿಡಾ : ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾಲು ಸಹಿತ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಜೋಯಿಡಾ ತಾಲ್ಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ನಡೆದಿದೆ.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿಕೊಂಡು ಬರುತ್ತಿದ್ದ ಕೆಎ: 17, ಎಎ: 3927 ಸಂಖ್ಯೆಯ ಬೊಲೆರೊ ಫಿಕಪ್ ವಾಹನವನ್ನು ಖಚಿತ ಮಾಹಿತಿಯನ್ನಾಧರಿಸಿ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ 19 ಲೀ ಅಕ್ರಮ ಗೋವಾ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡು, ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ದಾವಣಗೆರೆ ಜಿಲ್ಲೆಯ ಚಿಕ್ಕಕೊಗಲೂರು ಗ್ರಾಮದ ನಿವಾಸಿ ಲಕ್ಷ್ಮೀಪತಿ.ಆರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ವಶಪಡಿಸಿಕೊಳ್ಳಲಾದ ಮದ್ಯ ಹಾಗೂ ವಾಹನದ ಬೆಲೆ 8,33,440/-ಎಂದು ಅಂದಾಜಿಸಲಾಗಿದೆ. ವಾಹನದ ಮಾಲಕನನ್ನು ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಟಿ.ನಾಗರಾಜಪ್ಪ, ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಜಗದೀಶ್.ಎನ್.ಕೆ ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪಾಧೀಕ್ಷಕರಾದ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಟಿ.ಬಿ.ಮಲ್ಲಣ್ಣವರ್, ಅಬಕಾರಿ ಸಿಬ್ಬಂದಿಗಳಾದ ಎಸ್.ಬಿ.ಬನ್ಸೋಡೆ, ಎಸ್.ಡಿ.ರಾಥೋಡ್, ಯು.ಎನ್.ತುಳಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.