ಹಳಿಯಾಳ : ಭಾರತೀಯ ಸೇನೆಯಲ್ಲಿ ಸುಧೀರ್ಘ 28 ವರ್ಷಗಳ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿ ತಾಯ್ಮಾಡಿಗೆ ಮರಳಿದ ನಿವೃತ್ತ ಯೋಧ ಹಾಗೂ ಹಳಿಯಾಳ ತಾಲ್ಲೂಕಿನ ಕರ್ಲಕಟ್ಟಾ ಗ್ರಾಮದ ನಿವಾಸಿ ರಾಮಚಂದ್ರ ನಾರಾಯಣ ಗೌಡ ಅವರನ್ನು ಕರ್ಲಕಟ್ಟಾದಲ್ಲಿರುವ ಅವರ ನಿವಾಸದಲ್ಲಿ ಮಾಜಿ ಜಿ.ಪಂ ಉಪಾಧ್ಯಕ್ಷ ಸಂತೋಷ್ ರೇಣುಕೆ, ಕೆಪಿಸಿಸಿ ಸದಸ್ಯರಾದ ಸುಭಾಷ್ ಕೋರ್ವೆಕರ್, ಭಾಗವತಿ ಗ್ರಾ.ಪಂ ಉಪಾಧ್ಯಕ್ಷರಾದ ರಾಮಚಂದ್ರ ಬುರ್ಲಿ, ಹಳಿಯಾಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ ಮತ್ತು ಕಾಂಗ್ರೆಸ್ ಮುಖಂಡರಾದ ಸಂತೋಷ್ ಗಾವಾಡೆ ಹಾಗೂ ಸ್ಥಳೀಯರು ಸೇರಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಸನ್ಮಾನಿಸಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ಸುಭಾಷ್ ಕೋರ್ವೆಕರ್ ಮತ್ತು ರಾಮಚಂದ್ರ ಬುರ್ಲಿಯವರು ದೇಶ ಸೇವೆಯನ್ನು ಮಾಡಿದ ರಾಮಚಂದ್ರ ನಾರಾಯಣ ಗೌಡ ಅವರು ನಮ್ಮ ತಾಲೂಕಿನ ಹೆಮ್ಮೆ. ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ದೇಶ ಸೇವೆ ಮಾಡಿದ ಇವರನ್ನು ಗೌರವಿಸುವುದೆ ನಮ್ಮ ಭಾಗ್ಯ ಎಂದರು.
ಈ ಸಂದರ್ಭದಲ್ಲಿ ರಾಮಚಂದ್ರ ನಾರಾಯಣ ಗೌಡ ಅವರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್ ಹಾಗೂ ಸ್ಥಳೀಯ ಮುಖಂಡರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.



