ಮುಂಬೈ ಮಹಾನಗರ ಶೀಘ್ರದಲ್ಲೇ ಸ್ಫೋಟಿಸ್ತೇನೆ’: ಟ್ವಿಟ್ಟರ್‌ನಲ್ಲೇ ಪೊಲೀಸರಿಗೆ ಬಂತು ಬೆದರಿಕೆ ಸಂದೇಶ!

ಮುಂಬೈ (ಮೇ 23, 2023): ದೇಶದಲ್ಲಿ ಬಾಂಬ್‌ ಸ್ಫೋಟದಂತಹ ಘಟನೆಗಳು ಆಗಾಗಗ್ಗೆ ವರದಿಯಾಗುತ್ತಿರುತ್ತವೆ. ಆದರೂ, ಅದಕ್ಕಿಂತಲೂ ಹೆಚ್ಚಾಗಿ ಬೆದರಿಕೆ ಸಂದೇಶಗಳನ್ನು ಕಳಿಸುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಈ ಪೈಕಿ, ಬಹುತೇಕ ಬೆದರಿಕೆ ಸಂದೇಶ, ಇ – ಮೇಲ್, ಕರೆಗಳು ಸುಳ್ಳು ಎಂದು ಸಾಬೀತಾದರೂ ಪೊಲೀಸರು ಬಹುತೇಕ ಎಲ್ಲ ಕೇಸ್‌ಗಳಲ್ಲೂ ಎಚ್ಚರಿಕೆ ವಹಿಸುತ್ತಾರೆ. ಅದೇ ರೀತಿ, ಮುಂಬೈ ಪೊಲೀಸರಿಗೆ ಸಹ ಈಗ ಬೆದರಿಕೆ ಬಂದಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಅನ್ನೇ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದಾರೆ.

ಹೌದು, ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮತ್ತೊಮ್ಮೆ ಭೀತಿ ಹುಟ್ಟಿಸುವ ಬೆದರಿಕೆ ಪೊಲೀಸರಿಗೆ ಬಂದಿದೆ. ಇಲ್ಲಿಯವರೆಗೂ ಪೋಲಿಸರಿಗೆ ಈ ಬೆದರಿಕೆಗಳು ಫೋನ್ ಕರೆಗಳು ಮತ್ತು ಇ-ಮೇಲ್‌ಗಳ ಮೂಲಕ ಬರುತ್ತಿದ್ದವು, ಈಗ ವ್ಯಕ್ತಿಯೊಬ್ಬರು ಟ್ವಿಟ್ಟರ್‌ ಮೂಲಕ ಮುಂಬೈಯನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಒಂದು ದಿನದ ಹಿಂದೆ ಸಂದೇಶವನ್ನು ಸ್ವೀಕರಿಸಲಾಗಿದೆ.

ಮೇ 22 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಪೊಲೀಸರಿಗೆ ಬೆದರಿಕೆ ಬಂದಿದ್ದು, ವ್ಯಕ್ತಿಯೊಬ್ಬರು ಟ್ವಿಟ್ಟರ್‌ನಲ್ಲಿ “ನಾನು ಶೀಘ್ರದಲ್ಲೇ ಮುಂಬೈ ಸ್ಫೋಟಿಸಲಿದ್ದೇನೆ” ಎಂಬ ಬೆದರಿಕೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಸಂಬಂಧಪಟ್ಟ ಖಾತೆಯನ್ನು ತನಿಖೆ ಮಾಡಲು ಪ್ರಾರಂಭಿಸಿದರು ಮತ್ತು ವ್ಯಕ್ತಿಯನ್ನು ಗುರುತಿಸಿದರು. ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ (ಮೇ 22) ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಪೊಲೀಸರ ಟ್ವಿಟ್ಟರ್ ಖಾತೆಗೆ ಸಂದೇಶ ರವಾನೆಯಾಗಿದ್ದು, ‘ನಾನು ಮುಂಬೈಯನ್ನು ಅತಿ ಶೀಘ್ರದಲ್ಲಿ ಸ್ಫೋಟಿಸಲಿದ್ದೇನೆ’’ ಎಂದು ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆ ಭಯೋತ್ಪಾದಕ ಬೆದರಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.