ಪುಣೆ: ಕಾಲುಗಳು ಸರಿ ಇಲ್ಲದೆ ಅಂಗವೈಖಲ್ಯ ಕಾಡುತ್ತಿದ್ದರೂ, ವಿಶೇಷ ಚೇತನ ವ್ಯಕ್ತಿಯೊಬ್ಬ ತಳ್ಳುಗಾಡಿಯಲ್ಲಿ ಹಣ್ಣುಗಳನ್ನು ಮಾರುತ್ತಾ ಸ್ವಾಭಿಮಾನದಿಂದ ಜೀವನ ಮಾಡುತ್ತಿದ್ದ. ಅಂತಹವನ ಮೇಲೆ ಕೈಕಾಲು ಸರಿ ಇರುವ ದುಡಿದು ತಿನ್ನುವ ಯೋಗ್ಯತೆ ಇರುವ ವ್ಯಕ್ತಿಯೋರ್ವ ಸುಖಾಸುಮ್ಮನೆ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಅಮಾನವೀಯ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
29 ವರ್ಷದ ಸದ್ದಾಂ ಹುಸೇನ್ (saddam Husaine) ಎಂಬಾತನೇ ಹೀಗೆ ಹಲ್ಲೆಗೊಳಗಾದ ವಿಶೇಷ ಚೇತನ ವ್ಯಕ್ತಿ. ಈತ ರಸ್ತೆ ಬದಿ ತಳ್ಳುಗಾಡಿಯಲ್ಲಿ ಬಾಳೆಹಣ್ಣುಗಳನ್ನು ಮಾರಾಟ ಮಾಡುತ್ತಾ ಸ್ವಾಭಿಮಾನದ ಜೀವನ ನಡೆಸುತ್ತಿದ್ದ. ಈತ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ದಾರಿಯಲ್ಲಿ ಬಂದ ಯುವಕನೋರ್ವ ಆತನ ಗಾಡಿಯಲ್ಲಿದ್ದ ಬಾಳೆಹಣ್ಣುಗಳಿಂದ ನಾಲ್ಕು ಬಾಳೆಹಣ್ಣುಗಳನ್ನು (Banana) ಕಸಿದುಕೊಂಡಿದ್ದು, ಹಣವನ್ನೂ ನೀಡದೇ ಹೊರಟು ಹೋಗಿದ್ದಾನೆ. ಇದಕ್ಕೆ ವ್ಯಾಪಾರಿ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದು, ಆ ಯುವಕನನ್ನು ಪ್ರಶ್ನಿಸಿದ್ದಾನೆ. ಆದರೆ ತಪ್ಪನ್ನು ಒಪ್ಪಿಕೊಳ್ಳದ ದುರುಳ ಯುವಕ ವಿಶೇಷಚೇತನ (Physically Handicapped) ಯುವಕನ ಮೇಲೆಯೇ ಹಲ್ಲೆ ಮಾಡಿದ್ದು, ಆತನನ್ನು ರಸ್ತೆಗೆ ತಳ್ಳಿ ಹಾಕಿದ್ದಾನೆ. ಈ ವೇಳೆ ಸುತ್ತಮುತ್ತಲಿದ್ದ ಜನ ಅಲ್ಲಿ ಸೇರಿದ್ದು, ಕೈ ಕಾಲು ಸರಿ ಇರುವ ಯುವಕನ ಈ ಅಮಾನವೀಯ ಅಸಭ್ಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆಯ ಇಡೀ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ವಾಸೈ ವಿಹಾರ್ ಪೊಲೀಸ್ ಠಾಣೆಯಲ್ಲಿ ವಿಶೇಷ ಚೇತನ ಯುವಕ ಪ್ರಕರಣ ದಾಖಲಿಸಿದ್ದು, ಆತನ ಮೇಲೆ ಹಲ್ಲೆ ಮಾಡಿದ ಯುವಕ ಜೇಶನ್ ಡಿಸೋಜಾ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ (Mumbai) ಮೀರಾ ಭಯಂದರ್ ( Mira Bhayandar) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೇ. 1 ರಂದು ಈ ಘಟನೆ ನಡೆದಿದೆ.
ನನ್ನ ಗಾಡಿಯಿಂದ ನಾಲ್ಕು ಬಾಳೆಹಣ್ಣುಗಳನ್ನು ತೆಗೆದುಕೊಂಡು ಹಣ ನೀಡದೇ ಆತ ಹೋಗಿದ್ದಾನೆ. ಈ ಬಗ್ಗೆ ಕೇಳಿದಾಗ ನನ್ನ ಮೇಲೆ ಹಲ್ಲೆ ಮಾಡಿ ರಸ್ತೆಗೆ ತಳ್ಳಿದ್ದಾನೆ ಎಂದು ವಿಶೇಷ ಚೇತನ ವ್ಯಾಪಾರಿ ಹೇಳಿದ್ದಾನೆ. ವೀಡಿಯೋದಲ್ಲೂ ಈ ದೃಶ್ಯ ಸೆರೆ ಆಗಿದ್ದು, ಯುವಕನ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ನಮ್ಮ ಪ್ರಪಂಚದಲ್ಲಿ ಕೈಕಾಲು ಸರಿ ಇದ್ದರೂ ಕೆಲವರು ದುಡಿಯದೇ ಯಾರದೋ ಋಣ ತಿಂದು ಬದುಕಲು ಬಯಸಿದರೆ ಕೈಕಾಲು ಸರಿ ಇಲ್ಲದ ಜನರು ಸ್ವಾಭಿಮಾನದಿಂದ ಬದುಕುತ್ತಾರೆ. ಆದರೆ ಅಂತವರನ್ನು ಕೂಡ ನೆಮ್ಮದಿಯಾಗಿ ಬದುಕಲು ಇಂತಹ ಕೆಲ ಅವಿವೇಕಿಗಳು ಬಿಡದೇ ದೌರ್ಜನ್ಯವೆಸಗಿರುವುದು ದುರಂತ.