ಚಿಕ್ಕಮಗಳೂರಿನ ಭದ್ರಾ ಜಲಾಶಯ ಕಾಲುವೆ ನೀರಿನಲ್ಲಿ ಮುಳುಗಿ ಮೂವರ ಸಾವು

ಕ್ಕಮಗಳೂರು (ಮೇ 22): ರಾಜ್ಯದಲ್ಲಿ ನಿನ್ನೆ ಭಾನುವಾರ ಸುರಿದ ಗುಡುಗು-ಸಿಡಿಲು ಸಹಿತ ಬಿರುಗಾಳಿ ಮಳೆಯಿಂದಾಗಿ 10ಕ್ಕೂ ಅಧಿಕ ಸಾವು ಸಾಂಭವಿಸಿವೆ. ಇನ್ನು ಚಿಕ್ಕಮಗಳೂರಿನಲ್ಲಿ ನೀರಿನ ಕಾಲುವೆಯ ಬಳಿ ಆಟವಾಡಲು ಹೋದ ವೇಳೆ ಕಾಲು ಜಾರಿ ಬಿದ್ದವರನ್ನು ಕಾಪಾಡಲು ಹೋಗಿ ಒಬ್ಬೊಬ್ಬರಂತೆ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಮೂವರು ಮುಳುಗಿ ಸಾವನ್ನಪ್ಪರುವ ಘಟನೆ ನಡೆದಿದೆ. ನೀರಿನಲ್ಲಿ ಆಟವಾಡುವಾಗ ಆಯಾ ತಪ್ಪಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಆಟವಾಡುವಾಗ ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ದುರಂತ ಸಂಭವಿಸಿದೆ. ಮೃತರನ್ನು ರವಿ (31), ಅನನ್ಯ (17) ಹಾಗೂ ಶಾಮವೇಣಿ (16) ಎಂದು ಗುರುತಿಸಲಾಗಿದೆ. ರವಿ ಮೂಲತಃ ಲಕ್ಕವಳ್ಳಿ ನಿವಾಸಿ ಆಗಿದ್ದಾನೆ. ಇನ್ನು ಅನನ್ಯ ಮತ್ತು ಶಾಮವೇಣಿ ಇಬ್ಬರೂ ರವಿಯ ಸಹೋದರಿಯರ ಮಕ್ಕಳಾಗಿದ್ದರು. ನೀರಿನಲ್ಲಿ ಆಟವಾಡಲು ಹೋಗಿ ದುರಂತ ಸಂಭವಿಸಿದೆ.

ರವಿ ಅವರ ಅಕ್ಕಂದಿರನ್ನು ಶಿವಮೊಗ್ಗ ಮತ್ತು ನಂಜನಗೂಡಿಗೆ ಮದುವೆ ಮಾಡಿಕೊಡಲಾಗಿತ್ತು. ಅನನ್ಯ ಮೂಲತಃ ಶಿವಮೊಗ್ಗದ ನಿವಾಸಿ ಆಗಿದ್ದು, ಶಾಮವೇಣಿ ನಂಜನಗೂಡಿನವರು ಎಂದು ತಿಳಿದುಬಂದಿದೆ. ಇಬ್ಬರೂ ಸಹೋದರಿಯರ ಮಕ್ಕಳಾದ್ದರಿಂದ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಲಕ್ಕವಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದರು. ಬೆಳಗ್ಗೆಯೇ ಭದ್ರಾ ಜಲಾಶಯದ ಕಾಲುವೆಯ ಬಳಿ ಆಟವಾಡಲು ಹೋದಾಗ ಈ ಘಟನೆ ನಡೆದಿದ್ದು, ಮೃತ ರವಿ ದೇಹ ಮಾತ್ರ ಲಭ್ಯವಾಗಿದೆ. ಉಳಿದಂತೆ ಅನನ್ಯ ಹಾಗೂ ಶಾಮವೇಣಿ ಅವರ ಮೃತದೇಹಕ್ಕಾಗಿ ಶೋಧ ಮಾಡಲಾಗುತ್ತಿದೆ. ಈ ಘಟನೆ ಕುರಿತಂತೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.