ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಗಣಿಗಾರಿಕೆಗಾಗಿ ಪರಿಸರ ಹಾಳು ಮಾಡಿದ್ದಾಯ್ತು, ಅದಿರು ಹೊರತಗೆಯಲು ಲಕ್ಷಾಂತರ ಮರಗಳನ್ನ ಕಡಿಯಲಾಯ್ತು. ಇದೀಗ ರಸ್ತೆ ವಿಸ್ತರಣೆ ಹೆಸರಿನಲ್ಲಿ ಮತ್ತೆ ಮರಗಳ ಮಾರಣಹೋಮ ನಡೆಸಲು ಸರ್ಕಾರ ಸಜ್ಜಾಗಿದೆ ನೋಡಿ. ಇವು ಒಂದಲ್ಲ ಎರಡಲ್ಲ ಹತ್ತಾರು ವರ್ಷಗಳ ಕಾಲ ಹಳೆಯದಾದ ಮರಗಳು. ಬೃಹತ್ತಾಗಿ ಬೆಳೆದ ಈ ಮರಗಳು ಬಿಸಿಲ ನಾಡಿನ ಜನರ ಆಸರೆಯಾಗಿವೆ. ಬಿರು ಬಿಸಿಲಿನ ನಾಡಲ್ಲಿ ನೆರಳಿಗೆ ಛಾವಡಿಯಂತಿದ್ದ ಈ ಮರಗಳು ಇದೀಗ ನೆಲಕ್ಕುರಳಲು ರೆಡಿಯಾಗಿವೆ. ಹೌದು ರಸ್ತೆ ವಿಸ್ತರಣೆ ನೆಪದಲ್ಲಿ 425 ಮರಗಳನ್ನ ಕಡಿಯಲು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಯಿಂದ ಕುವೆಂಪು ನಗರದ ಮುಖ್ಯರಸ್ತೆಯ ಮೂಲಕ ಹೊಸಪೇಟೆಯ ರಸ್ತೆಯ ಇಕ್ಕೇಲುಗಳಲ್ಲಿ ಬೆಳೆದಿರುವ 425 ಮರಗಳನ್ನ ತೆರವುಗೊಳಿಸಲು ಅರಣ್ಯ ಇಲಾಖೆ ಇದೀಗ ಮುಂದಾಗಿದೆ.
ಈಗಾಗಲೇ ಹಲವಾರು ಸಂಘಟನೆಗಳು. ಪರಿಸರ ಪ್ರೇಮಿಗಳು ಮರ ಕಡಿಯಲು ಆಕ್ಷೇಪಣೆ ಸಲ್ಲಿಸಿದ್ದು. ಮರಗಳನ್ನ ಬೇರೆಡೆ ಸ್ಥಳಾಂತರ ಮಾಡದೇ ಕಡಿದು ಹಾಕಿದ್ರೆ, ಕಾನೂನು ಹೋರಾಟ ಮಾಡಲಾಗುವುದೆಂದು ಪರಿಸರ ಪ್ರೇಮಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಬಿಸಿಲ ನಾಡು ಬಳ್ಳಾರಿಯಲ್ಲಿ ನೆರಳು ಸಿಗೋದು ಅಪರೂಪ. ಅತಂಹದರಲ್ಲಿ ನೆರಳಿನ ಚಾವಡಿಯಾಗಿರುವ ಮರಗಳನ್ನ ಕಡಿಯಲು ಮುಂದಾಗಿರುವುದು ಇದೀಗ ಪರಿಸರ ಪ್ರೇಮಿಗಳ ಕೆಂಗೆಣ್ಣಿಗೆ ಗುರಿಯಾಗಿದೆ. ಹೀಗಾಗಿ ಇರುವ ಅಲ್ಪಸ್ವಲ್ಪ ಮರಗಳನ್ನಾದ್ರು ಉಳಿಸಿ ಎಂದು ಸ್ಥಳೀಯರು ಹೋರಾಟಕ್ಕೆ ಇಳಿದಿದ್ದಾರೆ. ಆದ್ರೆ, ಅರಣ್ಯ ಇಲಾಖೆ ಮಾತ್ರ ತಾವೇ ಬೆಳಿಸಿದ ಮರಗಳನ್ನ ಕಡಿದು ರಸ್ತೆ ಅಭಿವೃದ್ದಿಗೆ ಮುಂದಾಗಿರುವುದು ನಿಜಕ್ಕೂ ದುರಂತಮಯವಾಗಿದೆ.
ಬಿಸಿಲ ನಾಡು ಬಳ್ಳಾರಿಯಲ್ಲಿ ಮರಗಳೇ ಅಪರೂಪ. ಅದ್ರಲ್ಲೂ ಇದೀಗ ರಸ್ತೆ ಅಭಿವೃದ್ದಿಗಾಗಿ ಮರಗಳನ್ನ ಕಡಿಯಲು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ರಸ್ತೆ ವಿಸ್ತರಣೆಗೆ ತೆರವುಗೊಳಿಸುತ್ತಿರುವ ಮರಗಳನ್ನ ಬೇರೆಡೆ ಸ್ಥಳಾಂತರ ಮಾಡದೇ ಏಕಾಏಕಿ ಕಡಿದು ಹಾಕಲು ಮುಂದಾಗಿರುವುದು ನಿಜಕ್ಕೂ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ. ಪರಿಸರ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆ ವೇಳೆ ಮನೆಗೊಂದು ಮರ, ಊರಿಗೊಂದು ವನ ಎಂದು ಅರಣ್ಯ ಇಲಾಖೆಯೇ ಪ್ರಚಾರ ಮಾಡಿ ಇದೀಗ ಬೃಹತ್ತಾಗಿ ಬೆಳೆದು ನಿಂತಿರುವ ಮರಗಳನ್ನ ಸ್ವತ: ಅರಣ್ಯ ಇಲಾಖೆಯೇ ಕಡಿದು ಹಾಕಲು ಮುಂದಾಗಿರುವುದು ಹೋರಾಟಗಾರರು ಆಕ್ರೋಶಕ್ಕೆ ಕಾರಣವಾಗಿದೆ.