ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಒಂದೂ ಲಕ್ಷಕ್ಕೂ ಅಧಿಕ ದಾಖಲೆ ಮತಗಳನ್ನು ಪಡೆದು ಆಯ್ಕೆಯಾದ ಶಾಸಕ ಮಂಕಾಳ ವೈದ್ಯ ಅವರಿಗೆ ಮೀನುಗಾರಿಕೆ ಮತ್ತು ಬಂದರು ಸಚಿವ ಸ್ಥಾನ ನೀಡಬೇಕು ಎಂದು ಮೀನುಗಾರ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮೊಗೇರ ಸಮಾಜದ ಅಧ್ಯಕ್ಷ ಹಾಗೂ ಮೀನುಗಾರರ ಮುಖಂಡ ಅಣ್ಣಪ್ಪ ಮೊಗೇರ, ಶಾಸಕ ಮಂಕಾಳ ವೈದ್ಯರಿಗೆ ಕರಾವಳಿ ಪ್ರದೇಶದ ಮತ್ತು ಮೀನುಗಾರರ ಸಮಸ್ಯೆ ಕುರಿತು ಸಂಪೂರ್ಣ ಅರಿವಿದೆ. ಸ್ವತಹ ಅವರೂ ಕೂಡ ಮೀನುಗಾರ ಕುಟುಂಬದಿಂದಲೇ ಬಂದಿರುವುದರಿಂದ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಬೇಕಾದ ಯೋಜನೆ ರೂಪಿಸಲು ಅವರು ಸಮರ್ಥರಿದ್ದಾರೆ. ಸರಕಾರದ ಮತ್ತು ಬಂದರು ಮೀನುಗಾರಿಕಾ ಸಚಿವ ಸ್ಥಾನವನ್ನು ಮೀನುಗಾರಿಕೆ ಬಗ್ಗೆ ಅರಿವಿಲ್ಲದವರಿಗೆ ಕೊಟ್ಟರೆ ಮೀನುಗಾರರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಮಂಕಾಳು ವೈದ್ಯರಿಗೆ ನೀಡಿದಲ್ಲಿ ಜನರಿಗೆ ಒಳ್ಳೆಯದಾಗಲಿದೆ ಎಂದರು.
ಮೀನುಗಾರರ ಹಿರಿಯ ಮುಖಂಡ ರಾಷ್ಟ್ರೀಯ ಮೀನುಗಾರರ ಸಂಘಟನೆಯ ಮಾಜಿ ಉಪಾಧ್ಯಕ್ಷ ವಸಂತ ಖಾರ್ವಿ ಮಾತನಾಡಿ, ಮಂಕಾಳ ವೈದ್ಯರು ಒಂದು ಲಕ್ಷಕ್ಕೂ ಅಧಿಕ ಮತ ಪಡೆದು ಗೆದ್ದಿದ್ದಾರೆ. ಇವರ ಮೇಲೆ ಮೀನುಗಾರರು ಸೇರಿದಂತೆ ಎಲ್ಲಾ ಸಮಾಜದವರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಇದೊಂದೇ ಉದಾಹರಣೆ ಸಾಕು. ರಾಜ್ಯದಲ್ಲಿ ಆಯ್ಕೆಯಾದ ಮೀನುಗಾರರ ಏಕೈಕ ಪ್ರತಿನಿಧಿಯಾಗಿರುವ ಮಂಕಾಳ ವೈದ್ಯರು ಕೇವಲ ಕ್ಷೇತ್ರಕ್ಕಷ್ಟೇ ಅಲ್ಲ ಇಡೀ ಜಿಲ್ಲೆಯ ಜನರು ಪ್ರೀತಿಸುವವರು, ಅವರಿಗೆ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಚಿವ ಹುದ್ದೆ ಕೊಡಲೇಬೇಕು ಎನ್ನುವುದು ಮೀನುಗಾರರ ಒಕ್ಕೊರಲ ಆಗ್ರಹವಾಗಿದೆ ಎಂದು ಹೇಳಿದರು.
ಮೀನುಗಾರರ ಮುಖಂಡ ಎಫ್.ಕೆ. ಮೊಗೇರ ಮಾತನಾಡಿ, ನೈಜ ಮೀನುಗಾರರಿಗೆ ಮೀನುಗಾರಿಕಾ ಸಚಿವ ಸ್ಥಾನ ನೀಡುವುದರಿಂದ ಅವರಿಗೆ ಆ ಭಾಗದಲ್ಲಿ ಹೆಚ್ಚು ಕೆಲಸ ಮಾಡಲು ಅನುಕೂಲವಾಗಲಿದೆ. ಮಂಕಾಳ ವೈದ್ಯರು ಚಿಕ್ಕಂದಿನಿಂದ ಮೀನುಗಾರಿಕೆಯಲ್ಲಿ ಅನುಭವ ಹೊಂದಿದವರಾಗಿದ್ದು ಸಚಿವ ಸ್ಥಾನ ನೀಡಿದಲ್ಲಿ ಸಮರ್ಥವಾಗಿ ನಿಭಾಯಿಸಿ ಜನತೆಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂದರು.
ಮೀನುಗಾರರ ಮುಖಂಡ ಶಂಕರ ಹೆಬಳೆ ಮಾತನಾಡಿ, ಮೀನುಗಾರಿಕೆ ಅಭಿವೃದ್ಧಿಯಾಗಬೇಕು. ಮೀನುಗಾರಿಕೆ ಅಭಿವೃದ್ಧಿಯಾದರೆ ವ್ಯಾಪಾರ ವಹಿವಾಟು ಹೆಚ್ಚಲಿದೆ. ಮೀನುಗಾರಿಕಾ ಸಚಿವ ಸ್ಥಾನಕ್ಕೆ ಭಟ್ಕಳಕ್ಕೆ ಮಂಕಾಳ ವೈದ್ಯರೇ ಸೂಕ್ತ ವ್ಯಕ್ತಿಯಾಗಿದ್ದು, ಅವರನ್ನೇ ಈ ಇಲಾಖೆಯ ಸಚಿವರನ್ನಾಗಿ ಮಾಡಬೇಕು ಎಂದು ಹೇಳಿದರು.
ಪರ್ಶಿಯನ್ ಬೋಟ್ ಯೂನಿಯನ್ ಅಧ್ಯಕ್ಷ ವೆಂಕಟ್ರಮಣ ಮೊಗೇರ, ಉಪಾಧ್ಯಕ್ಷ ಭಾಸ್ಕರ ಖಾರ್ವಿ, ಅಳ್ಳೇಕೋಡಿ ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷ ಜಟ್ಗಾ ಮೊಗೇರ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮನಾಥ ಮೊಗೇರ, ಪ್ರಮುಖರಾದ ಯಾದವ್ ಅಲ್ವೇಕೋಡಿ, ಆನಂದ ಹರಿಕಾಂತ, ಅನಂತ ಮೊಗೇರ, ತಾಯೇರ್ ಬೋಂಬೆಕರ್, ಮುಂತಾದವರಿದ್ದರು.