ಬಾಗಲಕೋಟೆ ಬೈಕ್ ಅಪಘಾತ: ಮಗನ ಮಡಿಲಲ್ಲೇ ನರಳಿ ಪ್ರಾಣ ಬಿಟ್ಟ ತಂದೆ!

ಬಾಗಲಕೋಟೆ : ಬಾಗಲಕೋಟೆಯ ನಿವಾಸಿಗಳಾದ ತಂದೆ- ಮಗ ಬೈಕ್‌ನಲ್ಲಿ ಹೋಗುವಾಗ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದು ಕೆಳಗೆ ಬಿದ್ದ ತಂದೆಯ ಮೇಲೆ ಹರಿದು ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಶನಿವಾರ ನಡೆದಿದೆ.

ಬೈಕ್‌ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ರೆಹಮಾನಸಾಬ್ ಮುದಗಲ್ (50) ಎಂದು ಗುರುತಿಸಲಾಗಿದೆ. ಬಾಗಲಕೋಟೆಯ ನವನಗರದ ವಾಜಪೇಯಿ ಕಾಲೋನಿ ನಿವಾಸಿಯಾಗಿದ್ದ ರೆಹಮಾನ್ ಸಾಬ್ ಮಗ ಮಗ ಕಲಂದರ ಬಾಬಾನೊಂದಿಗೆ ಅಮೀನಗಡದಲ್ಲಿ ಟೈಲ್ಸ್‌ ಕೆಲಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆದರೆ, ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳಗೆ ಬಿದ್ದ ರೆಹಮಾನ್‌ ಸಾಬ್‌ ಮೇಲೆ ವಾಹನ ಹರಿದಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡ ಮಗ ತಂದೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಬೇಕು ಅನ್ನುವಷ್ಟರಲ್ಲೇ ಮಗನ ಮಡಿಲಲ್ಲೇ ತಂದೆ ಸಾವನ್ನಪ್ಪಿದ್ದಾರೆ.

ಪ್ರತಿನಿತ್ಯ ತಂದೆ ಮತ್ತು ಮಗ ಟೈಲ್ಸ್‌ ಕೆಲಸಕ್ಕೆ ಒಂದೇ ಬೈಕ್‌ನಲ್ಲಿ ಹೋಗುತ್ತೊದ್ದರು. ಆದರೆ, ಇಂದು ಅವರ ಅದೃಷ್ಟ ಕೈಕೊಟ್ಟಿದ್ದು, ಸಾವು ಖಚಿತವಾಗಿತ್ತು ಎಂದು ಕಾಣಿಸುತ್ತದೆ. ಮನೆಯಿಂದ ಕೆಲಸಕ್ಕೆ ಹೊರಟು ಕೆಲವೇ ನಿಮಿಷಗಳಲ್ಲಿ ಮನೆಯ ಕುಟುಂಬಸ್ಥರಿಗೆ ರೆಹಮಾನ್‌ ಸಾಬ್‌ ಸಾವನ್ನಪ್ಪಿದ ಸುದ್ದಿ ತಿಳಿದಿದ್ದು, ಬರಸಿಡಿಲು ಬಡಿದಂತಾಗಿದೆ. ಇನ್ನು ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗದೇ ಅಮೀನಗಡ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ತಂದೆಯ ಮೃತದೇಹವನ್ನೂ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ.