ವಿಜಯಪುರ: ಬೆಂಕಿ ಹಚ್ಚಿ ಮಹಿಳೆ ಕೊಂದ ವ್ಯಕ್ತಿಗೆ ಗಲ್ಲು

ವಿಜಯಪುರ(ಮೇ.20): ಮೈಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಕೊಲೆ ಮಾಡಿದ ಆರೋಪಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಅಕ್ಬರ್‌ ಉರ್ಫ್‌ ಅಕ್ಬರಬಾಶಾ ಗಾಲೀಬಸಾಬ್‌ ಬಾಗವಾನ ಗಲ್ಲು ಶಿಕ್ಷೆಗೀಡಾದ ವ್ಯಕ್ತಿ.

ಅಕ್ಬರ್‌ ಅದೇ ಗ್ರಾಮದ ಶಮಶಾದ್‌ ಎಂಬ ಮಹಿಳೆಯನ್ನು ಇಷ್ಟ ಪಡುತ್ತಿದ್ದ. ರಾತ್ರಿ ವೇಳೆ ಶಮಶಾದ್‌ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಆರೋಪಿ ನಿಂತು ನೋಡುತ್ತಿದ್ದ. ಇದರಿಂದಾಗಿ ಸಿಟ್ಟಾದ ಶಮಶಾದ್‌ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಳು.

ಆಗ ಕೋಪೋದ್ರಿಕ್ತನಾದ ಆರೋಪಿ ಅಕ್ಬರ್‌ ನನ್ನ 4 ಎಕರೆ ಜಮೀನು ಹೋಗಲಿ ನಿನ್ನನ್ನು ಬಿಡಲ್ಲ. ಇಲ್ಲವಾದಲ್ಲಿ ನಿನ್ನನ್ನು ಸುಟ್ಟು ಖಲಾಸ್‌ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದ. 2018ರ ಜನವರಿ 27 ರಂದು ಮಹಿಳೆಯು ತನ್ನ ಮನೆಯ ಮುಂದೆ ಮಕ್ಕಳೊಂದಿಗೆ ಕುಳಿತಿದ್ದಾಗ ಏಕಾಏಕಿ ಪೆಟ್ರೋಲ್‌ ತುಂಬಿದ 2 ಪ್ಲಾಸ್ಟಿಕ್‌ ಬಾಟಲಿ ಹಾಗೂ ಕಡ್ಡಿ ಡಬ್ಬಿ ಸಮೇತ ಬಂದು ಪೆಟ್ರೋಲ್‌ ಮೈಮೇಲೆ ಎರಚಿ ಕಡ್ಡಿ ಗೀರಿ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಗಂಭೀರ ಗಾಯಗೊಂಡ ಮಹಿಳೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ 2018ರ ಫೆ. 15 ರಂದು ಅಸುನೀಗಿದ್ದಳು. ಆಗಿನ ಸಿಂದಗಿ ಸಿಪಿಐ ಎಂ.ಕೆ.ದಾಮಣ್ಣವರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್‌.ಪಿ. ಅವರು, ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆಗಳನ್ನು ಪರಿಶೀಲಿಸಿ, ಆರೋಪಿ ಅಕ್ಬರಬಾಶಾ ಮೇಲಿನ ಆಪಾದನೆ ರುಜುವಾತು ಆಗಿದೆ ಎಂದು ತೀರ್ಮಾನಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದೇ ವೇಳೆ ಮೃತಳ ಕುಟುಂಬದವರಿಗೆ ಆರೋಪಿ . 5 ಲಕ್ಷ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ 1ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ವಿ.ಎಸ್‌.ಇಟಗಿ ವಾದ ಮಂಡಿಸಿದ್ದರು.