ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ: ರಾಜಕೀಯ ಕೆಸರೆರೆಚಾಟ ಶುರು

ಮಂಗಳೂರು: ಪುತ್ತೂರಿನಲ್ಲಿ (Puttur) ಹಿಂದೂ (Hindu) ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ  ಪ್ರಕರಣದಲ್ಲಿ ಹಲ್ಲೆ ನಡೆಸಲು ಪೊಲೀಸರ ಮೇಲೆ ಒತ್ತಡ ಹಾಕಿದ ವಿಚಾರವಾಗಿ ರಾಜಕೀಯ ಕೆಸರೆರೆಚಾಟ ಶುರು ವಾಗಿದೆ. ಕಾಂಗ್ರೆಸ್ (Congress) ಕುಮ್ಮಕ್ಕಿನಿಂದಲೇ ದೌರ್ಜನ್ಯ ನಡೆದಿದೆ ಎಂದು ಬಿಜೆಪಿ (BJP) ನಾಯಕರು ಆರೋಪಿಸಿದರೇ, ಬಿಜೆಪಿ ನಾಯಕರ ಒತ್ತಡದಿಂದಲೇ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇನ್ನು ಎರಡು ದಿನದಲ್ಲಿ ಒತ್ತಡ ಹಾಕಿದವರ ಹೆಸರು ಬಹಿರಂಗ ಪಡಿಸುವೆ ಎಂದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಈ ಮಧ್ಯೆ ಪುತ್ತೂರು ಡಿವೈಎಸ್ಪಿ ಜೊತೆಗೆ ಪಿಎಸ್ಐ, ಕಾನ್ಸ್‌ಟೇಬಲ್ ಅವರನ್ನು ಅಮಾನತು ಮಾಡಬೇಕು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ 307 ಕೇಸ್​ ದಾಖಲಿಸುವಂತೆ ಬಜರಂಗದಳ ಒತ್ತಾಯ ಮಾಡಿದೆ. ಅಮಾನತು ಮಾಡದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ?

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಪುತ್ತೂರು ಬಸ್​ ನಿಲ್ದಾಣದ ಬಳಿಯಲ್ಲಿ ರಾತ್ರೋರಾತ್ರಿ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಡಿವಿ ಸದಾನಂದ ಗೌಡ ಅವರ ಭಾವಚಿತ್ರ ಇರುವ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದ್ದು, ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು. ಈ ಬಗ್ಗೆ ಪುತ್ತೂರು ನಗರಸಭಾ ಆಯುಕ್ತ ಮಧು ಮನೋಹರ್ ಹಾಗೂ ಇತರರು ಪೊಲೀಸರಿಗೆ ದೂರು ನೀಡಿದ್ದರು. ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಆರೋಪಿಗಳ ಬಂಧಿಸಿ ಚಿತ್ರಹಿಂಸೆ ನೀಡಿದ ಪೊಲೀಸರು; ಆರೋಪ

ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆದಿದ್ದ ಪೋಲೀಸರು ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದೆ. ಆರೋಪಿಗಳಿಗೆ ರಕ್ತ ಒಸರುವಷ್ಟು ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ಕೇಳಿ ಬಂದಿದ್ದವು. ನಂತರ ಹಿಂದೂ ಸಂಘಟನೆ ಮುಖಂಡ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಆರೋಪಿಗಳನ್ನು ಬಿಡಿಸಿಕೊಂಡು ಬಂದಿದ್ದರು.

ಅಚ್ಚರಿಯ ವಿಷಯವೆಂದರೆ, ಪೊಲೀಸರಿಂದ ಹಲ್ಲೆಗೊಳಗಾದ ಕಾರ್ಯಕರ್ತರ ಪೈಕಿ ಬಹುತೇಕರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕಾರ್ಯನಿರ್ವಹಿಸಿದ್ದವರೇ ಆಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡ ವಿರುದ್ಧ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತರ ವಿರುದ್ಧವೇ ನಿರ್ಗಮಿತ ಶಾಸಕ ಸಂಜೀವ ಮಠಂದೂರು ಹಾಗೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ಹರಿದಾಡಿತ್ತು. ಇದಕ್ಕೂ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಶ್ರೀನಾಥ್ ರೆಡ್ಡಿ ಮತ್ತು ಅದೇ ಠಾಣೆಯ ಪೊಲೀಸ್ ಪೇದೆ ಹರ್ಷಿತ್​ನನ್ನು ಅಮಾನತುಗೊಳಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಅವರು ಘಟನೆ ಸಂಬಂಧ ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಪುತ್ತೂರು ಠಾಣೆಯ ಡಿವೈಎಸ್​ಪಿ, ಪುತ್ತೂರು ಗ್ರಾಮಾಂತರ ಪಿಎಸ್​ಐ, ಪೊಲೀಸ್ ಸಿಬ್ಬಂದಿ ಹರ್ಷಿತ್‌ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಟ್ವಾಳ ಡಿವೈಎಸ್​​ಪಿಗೆ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಲಾಗಿದೆ.

ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದ ವಿಚಾರಣೆ ವರದಿ ಸಲ್ಲಿಕೆಯಾಗಿದೆ. ಆ ವರದಿ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆ PSI ಹಾಗೂ ಸಿಬ್ಬಂದಿ ಹರ್ಷಿತ್ ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಆದೇಶ ಹೊರಡಿಸಿದ್ದರು. ಪುತ್ತೂರು DySP ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮೇಲಾಧಿಕಾರಿಗೆ ವರದಿ ಸಲ್ಲಿಸಲು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದರು.