ಒಡಿಶಾದ ಗೋಪಿನಾಥಪುರದ ಗೋಪಿನಾಥ ದೇಗುಲದಿಂದ ಶ್ರೀಕೃಷ್ಣನ ಆಭರಣಗಳನ್ನು ಕದ್ದೊಯ್ದ ಸ್ಥಳೀಯ ಕಳ್ಳನೊಬ್ಬ ಬರೋಬ್ಬರಿ ಒಂಬತ್ತು ವರ್ಷಗಳ ನಂತರ ಎಲ್ಲ ಆಭರಣಗಳನ್ನು ಹಿಂದಿರುಗಿಸಿರುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಆತ ತಾನು ಕದ್ದಿದ್ದ ಆಭರಣಗಳ ಜೊತೆಗೆ, 300 ರೂ. ಫೈನ್ ಕೂಡಾ ಕಟ್ಟಿದ್ದಾನೆ ಎಂಬುದು ಕುತೂಹಲಕಾರಿಯಾಗಿದೆ.
ಕಳ್ಳನು ಕದ್ದ ವಸ್ತುಗಳ ಚೀಲವನ್ನು ಮಧ್ಯರಾತ್ರಿ ದೇವಾಲಯದ ಮುಂಭಾಗದ ಬಾಗಿಲಲ್ಲಿ ಇಟ್ಟಿದ್ದಾನೆ. ಬ್ಯಾಗ್‌ನಲ್ಲಿ ಕದ್ದ ಕ್ಯಾಪ್, ಕಿವಿಯೋಲೆಗಳು, ಕಂಕಣ ಮತ್ತು ಪ್ರಧಾನ ದೇವತೆಗಳಾದ ಕೃಷ್ಣ ಮತ್ತು ರಾಧೆಗೆ ಸೇರಿದ ಕೊಳಲು ಇತ್ತು. ಈ ಆಭರಣಗಳ ಮೌಲ್ಯ ಲಕ್ಷಗಟ್ಟಲೆ ಇರಬಹುದೆಂದು ಅಂದಾಜಿಸಲಾಗಿದೆ.
ಕಳ್ಳತನವಾದ ವಸ್ತುಗಳ ಜೊತೆಗೆ ಕ್ಷಮಾಪಣೆ ಪತ್ರವೊಂದನ್ನು ಇಟ್ಟಿರುವ ಕಳ್ಳನು ಈ ಪತ್ರವನ್ನು ದೇವಾಲಯದ ಅರ್ಚಕ ದೇವೇಶ್ ಚಂದ್ರ ಮೊಹಂತಿ ಅವರನ್ನು ಉದ್ದೇಶಿಸಿ ಬರೆದಿದ್ದಾನೆ.
ಕಳ್ಳತನವಾದಾಗಿನಿಂದಲೂ ತನಗೆ ದುಃಸ್ವಪ್ನಗಳು ಬರುತ್ತಿವೆ. ಇತ್ತೀಚೆಗೆ ಭಗವದ್ಗೀತೆಯನ್ನು ಓದಿದ ಬಳಿಕ ತನಗೆ ತಪ್ಪಿನ ಅರಿವಾಗಿದೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ. ಇನ್ನು ಪತ್ರದೊಂದಿಗೆ ಹೆಚ್ಚುವರಿಯಾಗಿ 300 ರೂ. ತಪ್ಪುಕಾಣಿಕೆ ಇರಿಸಿದ್ದಾನೆ.
2014ರಲ್ಲಿ ಒಡಿಶಾದ ಗೋಪಿನಾಥಪುರದ ಗೋಪಿನಾಥ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿದ್ದು, ಅದರಲ್ಲಿ ದೇವರ ಬೆಳ್ಳಿಯ ಕೊಳಲು, ಛತ್ರಿ, ಕಿರೀಟ, ಬೆಳ್ಳಿಯ ಕಣ್ಣು, ತಟ್ಟೆ ಮತ್ತು ಗಡಿಯಾರ ಕಳವಾಗಿತ್ತು. ಈ ವೇಳೆ ಗ್ರಾಮಸ್ಥರು ಲಿಂಗರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಲವು ದಿನ ಹುಡುಕಾಟ ನಡೆಸಿದರೂ ಕಳ್ಳತನವಾದ ವಸ್ತುಗಳು ಪತ್ತೆಯಾಗದಿದ್ದಾಗ ಗ್ರಾಮಸ್ಥರು ನಿರೀಕ್ಷೆಯನ್ನೆಲ್ಲ ತೊರೆದಿದ್ದರು. ಆಭರಣಗಳನ್ನು ಹಿಂದಿರುಗಿಸಿದ ವಿಚಾರ ಕೇಳಿ ಈಗ ಗ್ರಾಮದಲ್ಲಿ ಸಂಭ್ರಮಾಚರಣೆಗಳು ನೆಡೆದಿವೆ.