ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಲೂಕ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರತಿ ವರ್ಷ ಮೇ 12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು ಆಚರಿಸಲಾಗುತ್ತದೆ. ಆಧುನಿಕ ನರ್ಸಿಂಗ್ ಪದ್ಧತಿಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ರವರ ಜನ್ಮ ದಿನದ ಅಂಗವಾಗಿ ದಾದಿಯರ ದಿನವನ್ನು ಆಚರಿಸುತ್ತಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ರಾಘು ಕಾಕರಮಠ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ದಾದಿಯರು ನೀಡಿದ ಅಗಾಧ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ ಮನೆಯಲ್ಲಿ ಹೇಗೆ ತಾಯಿಯಾದವಳು ಮಕ್ಕಳನ್ನು ನೋಡಿಕೊಳ್ಳುತ್ತಾಳೊ ಅದೇ ರೀತಿ ಆಸ್ಪತ್ರೆಯಲ್ಲಿ ದಾದಿಯರು ರೋಗಿಗಳ ಆರೈಕೆ ಮಾಡುತ್ತಾರೆ ಎಂದರು. ಪತ್ರಕರ್ತ ಕೆ. ರಮೇಶ ಮಾತನಾಡಿ ವೈದ್ಯಕೀಯ ಜಗತ್ತಿಗೆ ದಾದಿಯರ ಕೊಡುಗೆ ಅವಿಸ್ಮರಣೀಯ ಎಂದರು. ತಾಲೂಕ ವೈದ್ಯಾಧಿಕಾರಿ ಈಶ್ವರಪ್ಪ ಮಾತನಾಡಿ ವೈದ್ಯರ ಕೆಲಸಕ್ಕೆ ದಾದಿಯರ ಸಹಕಾರ ಇಲ್ಲದಿದ್ದರೆ ಯಾವ ರೋಗಿಯನ್ನೂ ಸಹ ಬದುಕಿಸಲು ಸಾಧ್ಯವಿಲ್ಲ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಮಾತನಾಡಿ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಮತ್ತು ಕಠಿಣ ಕೆಲಸವೆಂದರೆ ಅದು ಶುಶ್ರೂಷಕಿಯರ ಕೆಲಸ. ಇಂತಹ ಸವಾಲಿನ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ನಿಮಗೆ ಅನಂತ ನಮಸ್ಕಾರಗಳು ಎಂದರು.
ಪತ್ರಕರ್ತ ನಾಗರಾಜ ಜಾಂಬಳೇಕರ್ ಮಾತನಾಡಿ ಯುದ್ಧದ ಸಂದರ್ಭದಲ್ಲಿ ಸೈನಿಕರು ಹೇಗೆ ಶಸ್ತ್ರಾಸ್ತ್ರ ಸಮೇತ ತಯಾರಾಗಿರುತ್ತಾರೊ ಅದೇ ರೀತಿ ಕೊರೋನಾ ಸಂದರ್ಭದಲ್ಲಿ ದಾದಿಯರು ಸಕಲ ತಯಾರಿಯೊಂದಿಗೆ ನಾಗರಿಕರ ಜೀವ ಉಳಿಸಿದ್ದು ಸ್ಮರಣೀಯ ಎಂದರು.
ಕೆನರಾ ಟಿವಿ ಸಂಸ್ಥಾಪಕ ಮಂಜುನಾಥ ನಾಯ್ಕ ಮಾತನಾಡಿ ತಾಲೂಕ ಆಸ್ಪತ್ರೆಯಲ್ಲಿನ ದಾದಿಯರ ಕಾರ್ಯವನ್ನು ಶ್ಲಾಘಿಸಿದರು.
ತಾಲೂಕ ಆಡಳಿತಾಧಿಕಾರಿ ಡಾ. ಸಂತೋಷ ಕುಮಾರ್ ಮಾತನಾಡಿ ದಾದಿಯರ ದಿನದ ಇತಿಹಾಸವನ್ನು ತಿಳಿಸಿದರು.