ನವದೆಹಲಿ: ಪಾಕಿಸ್ತಾನದಿಂದ (Pakistan) ಡ್ರೋನ್ ಮೂಲಕ ಡ್ರಗ್ಸ್ ತರಿಸಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ದೆಹಲಿ ವಿಶೇಷ ಗುಪ್ತಚರ ದಳ (Delhi Intelligence Unit) ಶುಕ್ರವಾರ ಬಂಧಿಸಿದೆ.
ಆರೋಪಿಗಳನ್ನು ಪಂಜಾಬ್ (Punjab) ಮೂಲದ ಮಲ್ಕಿತ್ ಸಿಂಗ್, ಧಮೇರ್ಂದ್ರ ಸಿಂಗ್ ಮತ್ತು ಹರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪಾಕಿಸ್ತಾನದ ಡ್ರಗ್ಸ್ ದಂಧೆಕೋರರಿಗೆ ಹವಾಲಾ ಜಾಲದ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು. ಪ್ರತಿಯಾಗಿ ಡ್ರೋನ್‍ಗಳ ಮೂಲಕ ಡ್ರಗ್ಸ್ ಪಡೆಯುತ್ತಿದ್ದರು. ನಂತರ ಪಂಜಾಬ್ ಮತ್ತು ಇತರ ರಾಜ್ಯಗಳಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‍ನಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಅಮೆರಿಕ ಮತ್ತು ಫಿಲಿಪೈನ್ಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿ ಫಿಲಿಪೈನ್ಸ್ ಮತ್ತು ಯುಎಸ್‍ನ ಫೋನ್ ನಂಬರ್‌ಗಳು ಪತ್ತೆಯಾಗಿವೆ. ಅಲ್ಲದೆ ಡ್ರೋನ್‍ಗಳ ಮೂಲಕ ಸಾಗಾಣಿಕೆ ಮಾಡಿದ ಡ್ರಗ್ಸ್‍ಗಳನ್ನು ಎಲ್ಲಿ ಸಂಗ್ರಹಿಸಬೇಕೆಂದು ಈ ನಂಬರ್‌ಗಳ ಮೂಲಕ ಸೂಚನೆಗಳು ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಹೆರಾಯಿನ್ ಸರಬರಾಜು ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.