ಸೂಡಾನ್‌ನಲ್ಲಿ ಅಡ್ರೆಸ್‌ ಗೊತ್ತಿಲ್ಲದಿದ್ದರೂ 3500 ಭಾರತೀಯರ ರಕ್ಷಣೆ: ಆಪರೇಷನ್‌ ಕಾವೇರಿಗೆ ಭರ್ಜರಿ ಯಶಸ್ಸು

ನವದೆಹಲಿ (ಮೇ 8, 2023): ಆಂತರಿಕ ಯುದ್ಧಪೀಡಿತ ಸೂಡಾನ್‌ನಿಂದ ಎಲ್ಲ ಸುಮಾರು 3500 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಿ ತಾಯ್ನಾಡಿಗೆ ವಾಪಸು ತರಲಾಗಿದೆ. ಈ ಮೂಲಕ ‘ಆಪರೇಶನ್‌ ಕಾವೇರಿ’ ಭರ್ಜರಿ ಯಶ ಕಂಡಿದೆ. ಸೂಡಾನ್‌ನಲ್ಲಿ ಯಾವ ಭಾರತೀಯರು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇರದಿದ್ದರೂ ಕಾರ್ಯಾಚರಣೆಯನ್ನು ಯಶಗೊಳಿಸಲಾಗಿದೆ. ಹಾಗಿದ್ದರೆ ರಕ್ಷಣಾ ಕಾರ್ಯ ಯಶ ಕಂಡಿದ್ದು ಹೇಗೆ ಎಂಬ ತೆರೆಯ ಹಿಂದಿನ ಅಂಶಗಳನ್ನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನಾ ಮೇಜರ್‌ ಅಮತ್‌ ಬನ್ಸಲ್‌ ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಯೆಮೆನ್‌, ಉಕ್ರೇನ್‌ ಅಥವಾ ಅಷ್ಘಾನಿಸ್ತಾನ ಯುದ್ಧಪೀಡಿತ ಪ್ರದೇಶಗಳಿಂದಲೂ ಈ ಹಿಂದೆ ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆತರಲಾಗಿತ್ತು. ಆದರೆ ಈ ಹಿಂದೆಂದಿಗಿಂತ ಈ ಸಲದ ಕಾರ್ಯಾಚರಣೆ ಸವಾಲಿನದಾಗಿತ್ತು. ಉಕ್ರೇನ್‌, ಯೆಮೆನ್‌ ಹಾಗೂ ಆಫ್ಘನ್‌ನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಸಂಘರ್ಷ ನಡೆದಿದ್ದವು. ಆದರೆ ಸೂಡಾನ್‌ನಲ್ಲಿ ಎಲ್ಲೆಂದರಲ್ಲಿ, ಬೀದಿ ಬೀದಿಗಳಲ್ಲಿ ಸೇನಾ ಪಡೆ ಹಾಗೂ ಅರೆಸೇನಾಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಹೀಗಾಗಿ ರಕ್ಷಣೆ ಸವಾಲಿನದ್ದಾಗಿತ್ತು.

ಪ್ಲಾನ್‌ ಮಾಡಿದ್ದು ಹೀಗೆ:
ಸೂಡಾನ್‌ನಲ್ಲಿನ ಭಾರತೀಯರ ಗುರುತು ಪತ್ತೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಅನೇಕರ ಬಳಿ ಮೂಲ ಪಾಸ್‌ಪೋರ್ಟ್‌ ಇರಲಿಲ್ಲ. ಅರಬ್‌, ಆಫ್ರಿಕಾ ದೇಶಗಳಲ್ಲಿ ಉದ್ಯೋಗದಾತರ ಕಡೆ ಪಾಸ್‌ಪೋರ್ಟನ್ನು ಉದ್ಯೋಗಿಗಳು ‘ಪ್ಲೆಜ್‌’ ಮಾಡುವುದು ಸರ್ವೇಸಾಮಾನ್ಯ.

ಇಂಥ ಸಂದರ್ಭದಲ್ಲಿ ನಕ್ಷೆ ರೂಪಿಸವಲ್ಲಿ ನಿಷ್ಣಾತರಾಗಿದ್ದ ಸೇನಾಧಿಕಾರಿಯೊಬ್ಬರು ವಿಶಿಷ್ಟ ಉಪಾಯ ಮಾಡಿದರು. ಅವರು ಗೂಗಲ್‌ ಸ್ಪ್ರೆಡ್‌ಶೀಟ್‌ ಸಿದ್ಧಪಡಿಸಿದರು. ಈ ಅಧಿಕಾರಿಗೆ ಭಾರತೀಯರು ಇದ್ದ ಸ್ಥಳಗಳು, ಸಂಘರ್ಷ ಏರ್ಪಟ್ಟ ಸ್ಥಳಗಳ ಮಾಹಿತಿ ಇತ್ತು. ಇವುಗಳನ್ನು ಸಂಪರ್ಕ ಸಂಖ್ಯೆ ಹಾಗೂ ಇತರ ವಿವರಗಳ ಮೂಲಕ ನಕ್ಷೆಯಲ್ಲಿ ಗುರುತು ಮಾಡಲಾಯಿತು. ಎಲ್ಲ ಆದ ಬಳಿಕ ಸ್ಪ್ರೆಡ್‌ಶೀಟನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರು. ಈ ಸ್ಪ್ರೆಡ್‌ಶೀಟ್‌ಗೆ ಭಾರತೀಯರು ತ್ವರಿತವಾಗಿ ಪ್ರತಿಕ್ರಿಯಿಸಿದರು ಮತ್ತು 72 ಗಂಟೆಗಳಲ್ಲಿ 3000ಕ್ಕೂ ಹೆಚ್ಚು ಹೆಸರುಗಳನ್ನು ನೋಂದಾಯಿಸಲಾಯಿತು.

ಇನ್ನು ರಾಜಧಾನಿ ಖಾರ್ಟೋಮ್‌ 1000 ಚ.ಕಿಮೀ ನಷ್ಟು ಹರಡಿದ ಬೃಹತ್‌ ನಗರವಾದ ಕಾರಣ ಅಲ್ಲಿದ್ದ ಭಾರತೀಯರ ಪತ್ತೆ ಕೂಡ ಕಷ್ಟವಾಗಿತ್ತು. ಅವರ ಮಾಹಿತಿಯನ್ನೂ ಸ್ಪ್ರೆಡ್‌ಶೀಟ್‌ಗೆ ಹಾಕಲಾಯಿತು. ಹೀಗೆ ನಕ್ಷೆಗಳನ್ನು ಆಧರಸಿ ಭಾರತೀಯರನ್ನು ಪತ್ತೆ ಮಾಡಲಾಯಿತು.

ಕೇಳಿದಷ್ಟು ಹಣ ನೀಡಿ ಬಸ್‌ ಬುಕ್‌:
ಭಾರತೀಯರ ಮಾಹಿತಿ ಸಂಗ್ರಹವಾದ ನಂತರ ಅವರನ್ನು ದೇಶದ ಗಡಿಯ ಬಂದರಿಗೆ ಕರೆತರುವುದು ಸವಾಲಿನದಾಗಿತ್ತು. ವಿಮಾನ ನಿಲ್ದಾಣ ಬಂದ್‌ ಆಗಿದ್ದ ಕಾರಣ ಬಂದರಿಗೆ ಅವರನ್ನು ಕರೆತಂದು ಅಲ್ಲಿಂದ ಜೆಡ್ಡಾಗೆ ಸಾಗಿಸಿ ವಿಮಾನದಲ್ಲಿ ಭಾರತಕ್ಕೆ ಕರೆತರುವ ಯೋಜನೆ ರೂಪಿಸಲಾಗಿತ್ತು. ಇದ್ದುರಲ್ಲೇ ಶಾಂತವಾಗಿದ್ದ ಪೋರ್ಟ್‌ ಸೂಡಾನ್‌ಗೆ ಅವರನ್ನು ಕರೆತರಲು ನಿರ್ಧರಿಸಲಾಗಿತ್ತು.

ಖಾರ್ಟೋಮ್‌ಗೂ ಜೆಡ್ಡಾಗೂ 850 ಕಿ.ಮೀ. ದೂರವಿತ್ತು. ಹೀಗಾಗಿ ಅಲ್ಲಿನವರೆಗೆ ಬಸ್‌ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಬಸ್‌ ಮಾಲೀಕರು 3 – 4 ಪಟ್ಟು ಹೆಚ್ಚು ಬಾಡಿಗೆ ಕೇಳಿದರು. ಆದರೆ ಭಾರತ ಸರ್ಕಾರ ಕಮ್ಮಿ ಹಣ ನೀಡಲು ಬಯಸಿದಾಗ, ಬಾರದೇ ಕೈಕೊಟ್ಟರು. ಹೀಗಾಗಿ ಬಸ್‌ ಮಾಲೀಕರಿಗೆ ಕೇಳಿದಷ್ಟು ಹಣ ಕೊಟ್ಟು ಭಾರತೀಯರನ್ನು ಪೋರ್ಟ್‌ ಸೂಡಾನ್‌ಗೆ ಕರೆತರಲಾಯಿತು. ಅಲ್ಲಿಂದ ಜೆಡ್ಡಾಗೆ ಹಡಗಿನಲ್ಲಿ ಕರೆತಂದು ಜೆಡ್ಡಾದಿಂದ ವಿಮಾನದ ಮೂಲಕ ಭಾರತೀಯರನ್ನು ಕರೆತರಲಾಯಿತು ಎಂದು ಮೇ! ಅಮಿತ್‌ ಬನ್ಸಲ್‌ ಹೇಳಿದ್ದಾರೆ.