ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ಗೆ ಬಿಜೆಪಿ ಲೀಗಲ್ ನೋಟಿಸ್, ಕ್ಷಮೆಯಾಚಿಸಲು ಸೂಚನೆ.

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್ ಪಕ್ಷ ನೀಡಿರುವ ಜಾಹಿರಾತು ಸಂಬಂಧ ನೀತಿ ಸಂಹಿತೆ ಉಲ್ಲಂಘನೆ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ(Election Commission) ಈಗಾಗಲೇ ಡಿಕೆ ಶಿವಕುಮಾರ್(DK Shivakumar) ಅವರಿಗೆ ನೋಟಿಸ್ ಜಾರಿ ಮಾಡಿದೆ. ಇನ್ನು ಮತ್ತೊಂದೆಡೆ ಒಂದು ಹೆಜ್ಜೆ ಮುಂದಿಟ್ಟ ಬಿಜೆಪಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಕ್ರಿಮಿನಲ್ ಡಿಫಾಮೇಷನ್ ಲೀಗಲ್ ನೋಟಿಸ್ ನೀಡಿದೆ. ಸೋಮವಾರದೊಳಗೆ ಜಾಹೀರಾತು ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೇಶವಪ್ರಸಾದ್​ರಿಂದ ಲೀಗಲ್​ ನೋಟಿಸ್ ನೀಡಲಾಗಿದೆ.

ಕಾಂಗ್ರೆಸ್ ಪಕ್ಷ ದಿನ ಪತ್ರಿಕೆಗಳಲ್ಲಿ ಮೇ.5 ರಂದು ಭ್ರಷ್ಟಾಚಾರ ಆರೋಪಗಳಿರುವ ಆಧಾರರಹಿತ ಜಾಹಿರಾತು ನೀಡಿತ್ತು. ಈ ಸಂಬಂಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ದೂರು ಪರಿಶೀಲಿಸಿದ ಚುನಾವಣಾ ಆಯೋಗ ಆರೋಪಗಳ ಬಗ್ಗೆ ನೈಜ ಸಾಕ್ಷ್ಯ ಒದಗಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸೂಚನೆ ನೀಡಿತ್ತು. ಮೇ .7 ರ ಸಂಜೆ 7 ಗಂಟೆಯೊಳಗೆ ವಿವರಣೆ ಒದಗಿಸಲು ತಾಕೀತು ಮಾಡಿತ್ತು. ಸರ್ಕಾರದ ನೀತಿಯ ಬಗ್ಗೆ ಟೀಕಿಸುವ ಹಕ್ಕಿದೆ. ಆದರೆ ಜಾಹಿರಾತಿನಲ್ಲಿರುವುದು ಸಾಧಾರಣ ಆರೋಪಗಳಲ್ಲ. ಸರ್ಕಾರದ ಆಡಳಿತ ಯಂತ್ರದ ಮೇಲೆ ನಿರ್ದಿಷ್ಟವಾಗಿ ಭ್ರಷ್ಟಾಚಾರದ ಆರೋಪಿಸಲಾಗಿದೆ. ಇದು ಚುನಾವಣೆ ಪ್ರಕ್ರಿಯೆ ಮೇಲೂ ಪರಿಣಾಮ ಬೀರುವಂತದ್ದಾಗಿದೆ. ಜಾಹಿರಾತು ಗಮನಿಸಿದರೆ ಕಾಂಗ್ರೆಸ್ ಪಕ್ಷದ ಬಳಿ ಪುರಾವೆಗಳಿರಬೇಕು. ಹೀಗಾಗಿ ಸಂಜೆ 7 ಗಂಟೆಯೊಳಗೆ ಪುರಾವೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಇದಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದರು.