ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ :ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಭಟ್ಕಳ: ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ ನಡೆದ ವೇಳೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗುವ ವೇಳೆ ಪೊಲೀಸ್ ಜಿಪ್ ಅಡ್ಡಗಟ್ಟಿ ಕಲ್ಲಿನಿಂದ ಜೀಪ್ ಗ್ಲಾಸ್ ಒಡೆದಿರುವ ಘಟನೆ ಗುರುವಾರದಂದು ತಡರಾತ್ರಿ ನಡೆದಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಧಿತ ಆರೋಪಿಗಳನ್ನು ಹದ್ಲೂರ್ ನಿವಾಸಿ ಚಂದ್ರು ಸೋಮಯ್ಯ ಗೊಂಡ (28), ಸುಲ್ತಾನ್ ಸ್ಟ್ರೀಟ್ ಮೊಹ್ಮದ ಮೀರಾ ಮೊಹ್ಮದ್ ಇಮ್ರಾನ್ ಶೇಖ್ (35), ಸರ್ಪನಕಟ್ಟೆ ರವೀಂದ್ರ ಶಂಕರ ನಾಯ್ಕ (32), ಗುಳ್ಮೆಯ ಇಸ್ಮಾಯಿಲ್ ನೂರಾನಿ ಜಾಫರ ಸಾದಿಕ್ (26), ಗುಳ್ಮೆಯ ಸೈಯದ್ ಸಲೀಂ ಸೈಯದ್ ಸನಾವುಲ್ಲಾ ( 31), ಗುಳ್ಮೆಯ ಮಹ್ಮಧ ಫೈಜಾನ್ ಅಬ್ದುಲ್ ಅಜೀಂ (20) ಹಾಗೂ ಗುಳ್ಮೆಯ ಮೊಹಮ್ಮದ್ ಸದ್ದಾಂ ನಿಜಾಮುದ್ದೀನ್ ಸೈಯದ್ (24)
ಎಂದು ತಿಳಿದು ಬಂದಿದೆ.

ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು
ಮುಟ್ಟಿದ ವಿಷಯವಾಗಿ ಇಲ್ಲಿನ ಮುಖ್ಯ ರಸ್ತೆಯ ಮುಸ್ಬಾ ಕ್ರಾಸ್ ಸಮೀಪ ಅಪೋಲೋ ಪಾರ್ಮಸಿ ಎದುರಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ವೇಳೆ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ ಸಿಬ್ಬಂದಿ ಕೇಳಲು ಹೋದಾಗ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತಾ ಏರು ಧ್ವನಿಯಲ್ಲಿ ರಂಪಾಟ ಮಾಡಲು ಪ್ರಾರಂಭಿಸಿದಾಗ ಆರೋಪಿ ಚಂದ್ರ ಸೋಮಯ್ಯ ಗೊಂಡ ಮತ್ತು ಮೊಹಮ್ಮದ್ ಮೀರಾ ಇವರನ್ನು ವಶಕ್ಕೆ ಪಡೆದು ಸ್ಥಳಕ್ಕೆ ಬಂದ ಪೊಲೀಸ ಜೀಪಿನಲ್ಲಿ ಕರೆದುಕೊಂಡು ಹೋಗುವ ವೇಳೆ ಅಲ್ಲಿದ್ದ ಇನ್ನುಳಿದ ಆರೋಪಿತರು ಪೊಲೀಸ್ ಜೀಪ್‌ನ್ನು ಅಡ್ಡಗಟ್ಟಿ ಜೀಪ್ ಮುಂದಕ್ಕೆ ಹೋಗದಂತೆ ಅಡೆತಡೆ ಉಂಟು ಮಾಡಿ ಪೊಲೀಸ್ ಜೀಪಿನ ಗ್ಲಾಸನ್ನು ಕಲ್ಲಿನಿಂದ ಹೊಡೆದು ಹಾನಿ ಮಾಡಲಾಗಿದೆ.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಮಾಡಿದ್ದಲ್ಲದೇ ಆರೋಪಿ ಮೊಹಮ್ಮದ್ ಮೀರಾ ಈತನು ಪೊಲೀಸ ಸಿಬ್ಬಂದಿ ಗೌತಮ ಅವರ ಬಲ ಕೈಬೆರಳುಗಳನ್ನು ತಿರುವಿ ನೋವುಪಡಿಸಿದ್ದರಿಂದ ಆರೋಪಿತರ ಮೇಲೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ ಜೀಪನ ಎದುರಿನ ಗ್ಲಾಸ ಒಡೆದು ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಶುಕ್ರವಾರದಂದು ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದು ಒಟ್ಟು ಪ್ರಕರಣದ 7 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.

ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೆಲವು ಪರ ವಿರೋಧದ ಚರ್ಚೆಗಳು ಜೋರಾಗಿವೆ.

ಘಟನೆ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಎಡಿಷನಲ್ ಎಸ್.ಪಿ. ಸಿಟಿ ಜಯಕುಮಾರ್ ಭೇಟಿ ನೀಡಿದ್ದು ಸದ್ಯ ಭಟ್ಕಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಗಿದೆ.

ಘಟನೆ ಬಗ್ಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್  ಪ್ರತಿಕ್ರಿಯಿಸಿದ್ದು ‘ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಮಾರ್ಕೇಟ್ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ಹಾಗೂ ಗುರುವಾರದಂದು ತಡರಾತ್ರಿ ನಡೆದ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು ಇಂದು ರಾತ್ರಿ ತನಕ ರಂಜಾನ್ ಮಾರ್ಕೆಟ್ ನಡೆಸಬೇಕೋ ಬೇಡ ಎಂದು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದರು.

ಸದ್ಯ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಭಟ್ಕಳದಲ್ಲಿ ಮತ್ತೆ ಗಲಭೆ ಎಬ್ಬಿಸುವ ಹುನ್ನಾರಕ್ಕೆ ಕೆಲವರು ಕೈಹಾಕಿದ್ದಾರೆಂಬುದು ಮೇಲ್ನೋಟಕ್ಕೆ ಈ ಘಟನೆ ಕಾರಣವಾದಂತಿದ್ದು, ಇದಕ್ಕೆ ಇನ್ನೊಂದು ನಿದರ್ಶನ ಎಂಬಂತೆ ಗುರುವಾರ ತಡರಾತ್ರಿ ಭಟ್ಕಳ ಪಟ್ಟಣದಲ್ಲಿ ಪೋಲೀಸ ವಾಹನದ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ ಸಾಕ್ಷಿಗಾಗಿದೆ.

ನಡೆದದ್ದೇನು?

ಭಟ್ಕಳದಲ್ಲಿ ಪ್ರತಿ ವರ್ಷ ರಂಜಾನ್ ಹಬ್ಬದ ಆರಂಭದಿಂದ ಅಂತ್ಯದವರೆಗೆ ತಿಂಗಳುಗಳ ಕಾಲ ರಂಜಾನ್ ಮಾರ್ಕೆಟ್ ಇಡಲು ಪುರಸಭೆಯಿಂದ ಅವಕಾಶ ನೀಡಲಾಗುತ್ತದೆ. ಬಹುತೇಕ ಮುಸ್ಲಿಮರೇ ಇಲ್ಲಿ ವ್ಯಾಪಾರಿಗಳಾಗಿದ್ದರೂ, ಖರೀದಿಗೆ ಬರುವವರಲ್ಲಿ ಹೆಚ್ಚಿನವರು ಹಿಂದೂಗಳು. ಸಾವಿರಾರು ಜನ ಪ್ರತಿ ದಿನ ಸೇರುವ ಈ ಮಾರ್ಕೆಟ್ ಭಟ್ಕಳಿಗರಿಗೆ ಒಂದು ರೀತಿಯ ಸಂಭ್ರಮದ ವಾತಾವರಣ ಕಲ್ಪಿಸುತ್ತದೆ.

ಹೀಗೆ ಈ ವರ್ಷದ ರಂಜಾನ್ ಮಾರುಕಟ್ಟೆ ಮುಗಿಯಲು ಇನ್ನೊಂದು ದಿನ ಮಾತ್ರ ಬಾಕಿ ಇದೆ. ಆದರೆ ಗುರುವಾರದಂದು ಮಾರ್ಕೆಟ್ ನಲ್ಲಿನ ಜನಸಂದಣಿಯ ಲಾಭ ಪಡೆದ ಮೂವರು ಹಿಂದೂ ಯುವಕರು ಮುಸ್ಲಿಂ ಮಹಿಳೆಯರನ್ನ ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರೆನ್ನಲಾಗಿದೆ. ಈ ಮಾಹಿತಿ ತಿಳಿದ ಕೆಲ ಮುಸ್ಲಿಂ ಯುವಕರು ರೆಡ್ ಹ್ಯಾಂಡ್ ಆಗಿ ಈರ್ವರು ಯುವಕರನ್ನ‌ ಹಿಡಿದು ತದುಕಿದ್ದಾರೆ. ಮತ್ತೋರ್ವ ಓಡಿ ಹೋಗಿದ್ದಾನೆ.

ಈ ಘಟನೆಯ ಬಳಿಕ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಈರ್ವರು ಹಿಂದೂ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಜೀಪಿನಲ್ಲಿ ಠಾಣೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಅಷ್ಟರಲ್ಲೇ ಮುಸ್ಲಿಂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ‘ಅವರನ್ನ ನಮಗೆ ಕೊಡಿ, ನೀವ್ಯಾಕೆ ಕರೆದೊಯ್ಯುತ್ತೀರಿ’ ಎಂದು ಕೇಳಿ ಜೀಪು ತಡೆದಿದ್ದಾರೆ. ಅದಕ್ಕೆ ಸೊಪ್ಪು ಹಾಕದೇ ಪೊಲೀಸರು ಜೀಪನ್ನು ಚಲಾಯಿಸಿದ್ದು, ಇದರಿಂದಾಗಿ ಸಿಟ್ಟಿಗೆದ್ದ ಮುಸ್ಲಿಂ ಯುವಕರು ಕಲ್ಲೊಂದನ್ನ ಜೀಪಿನ ಮೇಲೆ ಎಸೆದಿದ್ದಾರೆ. ಕಲ್ಲೆಸೆತದಿಂದ ಜೀಪಿನ ಗಾಜು ಒಡೆದಿದ್ದು, ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ರಾಜಕೀಯದ ಬಣ್ಣ :

ಘಟನೆ ಹೀಗಿರುವಾಗ ಕೆಲ ವಾಟ್ಸಪ್ ಗ್ರೂಪ್ ಗಳಲ್ಲಿ ಈ ಘಟನೆಗೆ ಕೋಮು ಬಣ್ಣ ಹಚ್ಚಿ, ರಾಜಕೀಯವಾಗಿ ಲಾಭ ಗಳಿಸುವ ಹುನ್ನಾರ ನಡೆಸಲಾಗುತ್ತಿದೆ. ‘ಮತದಾರರೇ, ಇದು ಎಲ್ಲೋ ಜಮ್ಮು ಕಾಶ್ಮೀರದಲ್ಲಿ ನಡೆದ ಘಟನೆಯಲ್ಲ. ನಮ್ಮ ಭಟ್ಕಳದಲ್ಲಿ ನಡೆದ ಘಟನೆ. ನೀವು ಆ ಪಕ್ಷಕ್ಕೆ ಮತ ನೀಡಿದರೆ ಮುಂದೆ ಹೀಗೆ ಆಗುತ್ತದೆ, ಎಚ್ಚರ ವಹಿಸಿ ಇದೇ ಪಕ್ಷಕ್ಕೆ ಮತ ಹಾಕಿ’ ಎಂದು ಪೋಸ್ಟ್ ಗಳನ್ನ ವೈರಲ್ ಮಾಡಲಾಗುತ್ತಿದೆ. ಘಟನೆಯ ಹಿನ್ನೆಲೆ ಅರಿಯದೆ ಕೆಲವರು ಇದೇ ತಲೆಬರಹದಲ್ಲಿ ಪೊಲೀಸ್ ಜೀಪಿನ ಗಾಜು ಒಡೆದ ವಿಡಿಯೋವನ್ನ ವೈರಲ್ ಮಾಡುತ್ತಿದ್ದಾರೆ.

ಪೊಲೀಸರು ಹೇಳೋದೇನು?

‘ಯುವತಿಯೊಂದಿಗೆ ಯುವಕ ಅನುಚಿತವಾಗಿ ವರ್ತಿಸಿದ್ದಾನೆಂಬ ಕಾರಣಕ್ಕೆ ಗಲಾಟೆ ನಡೆದಿದ್ದು, ಪೊಲೀಸರು ಆ ಯುವಕನನ್ನು ಜೀಪಿನಲ್ಲಿ ಕರೆದುಕೊಂಡು ಬರುವ ವೇಳೆ ಆತನನ್ನ ನಮ್ಮ ವಶಕ್ಕೆ ಕೊಡಿ ಎಂದು ಗಲಾಟೆ ನಡೆಸಲಾಗಿತ್ತು. ಇದೊಂದು ಸಣ್ಣ ಘಟನೆ. ಇದಕ್ಕೆ ಸಂಬಂಧಿಸಿದಂತೆ ದೊಂಬಿ ಪ್ರಕರಣ ದಾಖಲಾಗಿದ್ದು, ಏಳು ಮಂದಿಯನ್ನ ಬಂಧಿಸಿದ್ದೇವೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ತಿಳಿಸಿದ್ದಾರೆ.

ಬಂಧಿತ ಏಳು ಮಂದಿಯಲ್ಲಿ ಈರ್ವರು ಹಿಂದೂ ಯುವಕರು ಹಾಗೂ ಐವರು ಮುಸ್ಲಿಂ ಯುವಕರಾಗಿದ್ದಾರೆ. ಗುರುವಾರದಂದು ತಡರಾತ್ರಿ ನಾಲ್ವರನ್ನು ಬಂಧಿಸಿದ್ದು ಇನ್ನುಳಿದ ಮೂವರನ್ನು ಶುಕ್ರವಾರದಂದು ಮುಂಜಾನೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಕರಣ ಸಂಬಂಧ ಗಲಭೆಯಲ್ಲಿ ಇದ್ದ ಏಳು ವ್ಯಕ್ತಿಯ ವಿರುದ್ದ ಭಟ್ಕಳ ನ್ಯಾಯಾಲಯ ಮೇ 4ರವರೆಗೆ ಬಂಧನ ವಿಸ್ತರಿಸಿ ಆದೇಶಿಸಿದೆ.