ಕುಮಟಾ : ಹೊಳೆಗದ್ದೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳ ಕಾಲ ಇದ್ದು ಪೂಜೆ ಸ್ವೀಕರಿಸಿದ ಶ್ರೀ ಚಂದಾವರ ಹನುಮಂತ ದೇವರ ಪಲ್ಲಕ್ಕಿಯು ಧಾರೇಶ್ವರದ ಧಾರಾನಾಥ ದೇವಾಲಯಕ್ಕೆ ಆಗಮಿಸಿತು. ದೇವರ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿ ಹನುಮನ ಧ್ವಜ ಹಿಡಿದು, ಜಯ ಘೋಷಗಳನ್ನು ಕೂಗಿದರು. ಸಮವಸ್ತ್ರ ಧರಿಸಿದ್ದ ನೂರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತ ನೀಡಿದರು. ಚಂಡೆ ವಾದನ, ಸುಗ್ಗಿ ಕುಣಿತ, ವಿವಿಧ ವೇಷಭೂಷಣ ತೊಟ್ಟ ಜನರಿಂದ ಕೂಡಿದ ಮೆರವಣಿಗೆಯಲ್ಲಿ ಸಾಗರದಂತೆ ಜನರು ಸಾಗಿ ದೇವಾಲಯಕ್ಕೆ ಹನುಮನನ್ನು ಬರಮಾಡಿಕೊಂಡರು.
ಇನ್ನು ಹತ್ತು ದಿನಗಳ ಕಾಲ ಧಾರೇಶ್ವರದ ವಿವಿಧ ಭಾಗಗಳಿಗೆ ತೆರಳಿ ಹನುಮಂತನ ಪಲ್ಲಕ್ಕಿಯು ಪೂಜೆ ಸ್ವೀಕರಿಸಿ, ಜನರಿಗೆ ಹರಕೆ ಪ್ರಾರ್ಥನೆಗೆ ಅವಕಾಶ ನೀಡಲಿದೆ. ವಿವಿಧ ಧಾರ್ಮಿಕ ಹಾಗೂ ಯಕ್ಷಗಾನ ಸೇವೆಗಳೂ ಈ ಸಮಯದಲ್ಲಿ ನಡೆಯಲಿದೆ.