ಮಂಗಳೂರು: ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ (86) ನಿಧನರಾಗಿದ್ದಾರೆ. ವಯೋಸಹಜ ಕಾರಣಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ‘ಪುದಿಯಾಪುರ್ (ಹೊಸಮನೆ) ತರವಾಡು ಮನೆಯಲ್ಲಿ ಪಿ. ಅಹ್ಮದ್ ಮತ್ತು ಜೈನಾಬಿ ದಂಪತಿಗಳ ಮಗಳಾಗಿ ಜನಿಸಿದ್ದ ಸಾರಾ 1984ರಲ್ಲಿ ರಚಿಸಿದ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ‘ಹೊತ್ತು ಕಂತುವ ಮುನ್ನ’ ಅವರ ಆತ್ಮಕತೆ. ಸುಮಾರು 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ ನಾಟಕ, ಲೇಖನ, ಪ್ರವಾಸ ಕಥನ ಸಹಿತ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಬಹಳ ಸರಳವಾಗಿ ಜೀವನ ನಡೆಸುತ್ತಿದ್ದ ಸಾರಾ ಅಬೂಬಕ್ಕರ್ ಅವರು ತಮ್ಮ ಬರವಣಿಗೆಯಲ್ಲಿ ಮುಸ್ಲಿಂಮರ ಕೆಲವು ಸಂಪ್ರದಾಯವನ್ನು ಟೀಕಿಸುತ್ತಾ, ಅದನ್ನು ಧಿಕ್ಕರಿಸುತ್ತಾ ಬಂದವರು. ಪ್ರಾಯಕ್ಕೆ ಬಂದಾಗ ಎಂಜಿನಿಯರ್ ಆಗಿದ್ದ ಅಬೂಬಕ್ಕರ್ ಅವರೊಂದಿಗೆ ಸಾರಾ ಅವರ ವಿವಾಹವಾಯಿತು. ಬಳಿಕ ಸಾರಾ ಹೆಸರಿನ ಜೊತೆಗೆ ಗಂಡ ಅಬೂಬಕ್ಕರ್ ಹೆಸರನ್ನು ಜೋಡಿಸಿಕೊಂಡರು.
ಈ ಖ್ಯಾತ ಲೇಖಕಿಯ ಸಾವು ಕರುನಾಡಿಗೆ ಮತ್ತು ಗಡಿನಾಡಿಗೆ ನಷ್ಟವೇ ಸರಿ. ಮಂಗಳೂರಿನ ಲಾಲ್ ಭಾಗ್ ನ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರಾ ಅಬೂಬಕ್ಕರ್ ಅವರು 4 ಗಂಡು ಮಕ್ಕಳನ್ನು ಹೊಂದಿದ್ದು, ಅಪಾರ ಬಂಧು ಮಿತ್ರರನ್ನು ಹೊಂದಿದ್ದಾರೆ.