ಹಾರ್ವರ್ಡ್ ಲಾ ಸ್ಕೂಲ್ ಸೆಂಟರ್‌ ನೀಡುವ ‘ಜಾಗತಿಕ ನಾಯಕತ್ವ ಪ್ರಶಸ್ತಿ’ ಗೆ ಸಿಜೆಐ ಡಿ ವೈ ಚಂದ್ರಚೂಡ್ ಆಯ್ಕೆ.!

ನವದೆಹಲಿ: ದೇಶ ಮತ್ತು ವಿಶ್ವದಾದ್ಯಂತ ವಕೀಲ ವೃತ್ತಿಗೆ ಸಲ್ಲಿಸಿದ ಜೀವಮಾನದ ಸೇವೆಯನ್ನು ಗುರುತಿಸಿ  ಸಿಜೆಐ ಡಿ ವೈ ಚಂದ್ರಚೂಡ್ ಅವರಿಗೆ ಹಾರ್ವರ್ಡ್ ಲಾ ಸ್ಕೂಲ್ ಸೆಂಟರ್‌ ‘ಜಾಗತಿಕ ನಾಯಕತ್ವ ಪ್ರಶಸ್ತಿ’ ಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಜ. 11 ರಂದು ಆನ್‌ಲೈನ್ ಮೂಲಕ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

ಚಂದ್ರಚೂಡ್ ಅವರು ಯುನೈಟೆಡ್ ಸ್ಟೇಟ್ಸ್‌ನ ಹಾರ್ವರ್ಡ್ ಲಾ ಸ್ಕೂಲ್‌ನಿಂದ ಎಲ್ಎಲ್ಎಂ ಪದವಿ ಮತ್ತು ನ್ಯಾಯಾಂಗ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಹಾರ್ವರ್ಡ್ ಲಾ ಸ್ಕೂಲ್ ಸೆಂಟರ್‌ ನ ಪ್ರೊಫೆಸರ್ ಡೇವಿಡ್ ವಿಲ್ಕಿನ್ಸ್ ಸಿಜೆಐ ಚಂದ್ರಚೂಡ್ ಅವರ ಜೊತೆ ಸಂವಾದ ನಡೆಸಲಿದ್ದಾರೆ.

ಅಯೋಧ್ಯೆ ಭೂ ವಿವಾದ ಪ್ರಕರಣ ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ನೀಡಿದ ಸುಪ್ರೀಂ ಕೋರ್ಟ್ ಪೀಠಗಳ ಭಾಗವಾಗಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕಳೆದ ನ. 9 ರಂದು ಸುಪ್ರೀಂ ಕೋರ್ಟ್ ನ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.