ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾನನ್ನು ಶನಿವಾರ ಬೆಂಗಳೂರಿನಲ್ಲಿ ಬಂಧನ ಮಾಡಲಾಗಿದೆ.
ಆರೋಪಿ ಮಿಶ್ರಾನನ್ನು ಬಂಧಿಸಿ ದೆಹಲಿಗೆ ಕರೆತರಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್‌ನಲ್ಲಿ ನ.26 ರಂದು ಮಹಿಳೆ ಮೇಲೆ ಶಂಕರ್ ಮಿಶ್ರಾ ಮೂತ್ರ ವಿಸರ್ಜಿಸಿದ್ದರು ಎಂಬ ಆರೋಪವನ್ನು ಮಹಿಳೆಯೋರ್ವಳು ಮಾಡಿದ್ದರು.
ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಆರೋಪಿ ಪತ್ತೆಗಾಗಿ ಪೊಲೀಸರ ಎರಡು ತಂಡ ಹುಡುಕಾಟ ನಡೆಸಿತ್ತು. ಇದರ ಹಿನ್ನೆಲೆ ಪೊಲೀಸರ ಒಂದು ತಂಡ ಬೆಂಗಳೂರಿನಲ್ಲಿರುವ ಮಿಶ್ರಾ ಸಹೋದರಿ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರೆ, ಇನ್ನೊಂದು ತಂಡ, ಮುಂಬೈನಲ್ಲಿರುವ ಮಿಶ್ರಾ ತಂದೆ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಅಲ್ಲದೇ ಮಿಶ್ರಾ ವಿದೇಶ ಪ್ರಯಾಣ ಮಾಡದಂತೆ ಪೊಲೀಸರು ಲುಕ್ ಔಟ್ ಆದೇಶ ಹೊರಡಿಸಿದ್ದರು.
ಶಂಕರ್ ಮಿಶ್ರಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಎದುರಿಸುತ್ತಿರುವ ಕಾರಣದಿಂದ ಮಿಶ್ರಾ ಕೆಲಸ ಮಾಡುತ್ತಿದ್ದ ಅಮೆರಿಕದ ವೆಲ್ಸ್ ಫ್ರಾಗೋ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ.